ಅಡುಗೆಗೆ ಬಳಸುವ ಟೇಸ್ಟಿಂಗ್ ಪೌಡರ್ ನಿಷೇಧಕ್ಕೆ ಚಿಂತನೆ
ಆರೋಗ್ಯದ ದೃಷ್ಟಿಯಿಂದ ಗೋಬಿ ಮಂಚೂರಿ, ಫ್ರೈಡ್ ರೈಸ್ ಸೇರಿದಂತೆ ಇತರೆ ಚೈನೀಸ್ ಫುಡ್ ಗಳಲ್ಲಿ ರುಚಿ ಹೆಚ್ಚಿಸಲು ಈ ಅಜಿನೊಮೊಟೊ ಎಂಬ ರುಚಿ ನೀಡುವ ಪೌಡರನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು, ಮಾರ್ಚ್.21 : ಅಡುಗೆಗೆ ರುಚಿವರ್ಧಕ ಅಂಶವಾಗಿ ಬಳಕೆಯಾಗುತ್ತಿರುವ ಅಜಿನೊಮೊಟೊ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಸೋಮವಾರ ವಿಧಾನ ಪರಿಷತ್ ನಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಸುಳಿವು ಕೊಟ್ಟಿದ್ದಾರೆ.
ಗೋಬಿ ಮಂಚೂರಿ, ಫ್ರೈಡ್ ರೈಸ್ ಸೇರಿದಂತೆ ಇತರೆ ಚೈನೀಸ್ ಫುಡ್ ಗಳಲ್ಲಿ ರುಚಿ ಹೆಚ್ಚಿಸಲು ಹೋಟೆಲ್ ಗಳಲ್ಲಿ ಈ ಅಜಿನೊಮೊಟೊ ಎಂಬ ರುಚಿ ನೀಡುವ ಪೌಡರನ್ನು ಬಳಸಲಾಗುತ್ತದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅಜಿನೊಮೊಟೊನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಬೀದಿಗಳಲ್ಲಿ ತಯಾರಿಸುವ ಗೋಬಿ ಮಂಚೂರಿ ಮತ್ತು ಫ್ರೈಡ್ ರೈಸ್ ಹೆಚ್ಚಿನ ರುಚಿಗಾಗಿ ಟೇಸ್ಟಿಂಗ್ ಪೌಡರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ವೈಜ್ಞಾನಿಕವಾಗಿ ಹಲವು ರೋಗಗಳಿಗೆ ಕಾರಣವಾಗಿರುವುದು ವಿವಿಧ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.
ಇದರಿಂದ ತಲೆನೋವು, ಹೊಟ್ಟೆ ತೊಳಸುವುದು, ಎದೆನೋವು, ತಲೆಸುತ್ತು, ನಿಶಕ್ತಿಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುವುದು ಅಪರಾಧವಾಗಿದೆ ಈ ಬಗ್ಗೆ ಸರಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.












Click it and Unblock the Notifications