Ration Card: ರಾಜ್ಯದಲ್ಲಿ 14 ಲಕ್ಷ ಅನರ್ಹ ರೇಷನ್ ಕಾರ್ಡ್ ಪತ್ತೆ
ಕರ್ನಾಟಕದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿ (Ration Cards) ಗಳನ್ನು ಗುರುತಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಹೆಚ್ಚಾದ ಬೆನ್ನಲ್ಲೇ ಕ್ರಮ ತೆಗೆದುಕೊಂಡಿರುವ ಅಧಿಕಾರಿಗಳು ಸುಮಾರು 14 ಲಕ್ಷ ಅನರ್ಹ ರೇಷನ್ ಕಾರ್ಡ್‌ಗಳನ್ನು ಗುರುತಿಸಿದ್ದಾರೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ಸಚಿವ ಕೆ ಎಚ್ ಮುನಿಯಪ್ಪ, ನಮ್ಮ ಇಲಾಖೆಯ ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ರೇಷನ್ ಕಾರ್ಡ್‌ಗಳು ಕೂಡ ಸೇರಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 1.51 ಕೋಟಿ ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ಒಟ್ಟ 4.35 ಕೋಟಿ ಫಲಾನುಭವಿಗಳು ಸವಲತ್ತು ಪಡೆಯುತ್ತಿದ್ದಾರೆ. 6 ತಿಂಗಳವರೆಗೆ ಪಡಿತರ ಪಡೆಯದೇ ಇರುವವರು, ಒಂದು ವರ್ಷದವರೆಗೆ ಡಿಬಿಟಿ ಪಡೆಯದೇ ಇರುವವರು ಮತ್ತು ನಿಗದಿ ಮಾಡಿದ್ದಕ್ಕಿಂತ ಹೆಚ್ಚನ ವಾರ್ಷಿಕ ಆದಾಯ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸಲಾಗಿದೆ. ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಕಾರ್ಡ್‌ಗಳನ್ನು ಅನರ್ಹಗೊಳಿಸಿದಂತೆ ಹೊಸ ರೇಷನ್ ಕಾರ್ಡ್‌ಗಳನ್ನು ವಿತರಣೆ ಮಾಡಲು ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಪ್ರತಿ ಅನ್ನಭಾಗ್ಯ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂಪಾಯಿಗಳ ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮುಂದುವರಿಯುತ್ತದೆ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಅಕ್ಕಿ ಕೊಡಲು ಒಪ್ಪಿದ ಕೇಂದ್ರ
ರಾಜ್ಯಕ್ಕೆ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದರು. 28 ರೂಪಾಯಿಯಂತೆ ಹೆಚ್ಚುವರಿ ಕಾರ್ಡ್‌ಗಳಿಗೆ ಅಗತ್ಯವಿರು 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಖರೀದಿ ಮಾಡಲಿದೆ ಎಂದು ಹೇಳಿದರು.
2023-24 ರಲ್ಲಿ ರಾಜ್ಯಕ್ಕೆ ವಾರ್ಷಿಕ 27.48 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 34.6 ರೂಪಾಯಿಗಳಂತೆ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಅಕ್ಕಿ ಸಿಗದ ಕಾರಣ ರಾಜ್ಯ ಸರ್ಕಾರ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವ ಬದಲು 170 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ನಿರ್ಧರಿಸಿತು.
ಹೋಟೆಲ್, ಸಮುದಾಯ ಭವನ, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.












Click it and Unblock the Notifications