ಮೋದಿ ಸರ್ಕಾರದಿಂದ ಮಾತ್ರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ, ಇದು ಕನ್ನಡಿಗರಿಗೂ ಗೊತ್ತಿದೆ-ವಿಜಯೇಂದ್ರ
ಬೆಂಗಳೂರು, ಫೆಬ್ರವರಿ 07: ಸತ್ಯದ ಮುಂದೆ ಸೃಷ್ಠಿಯಾಗುವ ಸುಳ್ಳು ಅಲ್ಪಾಯುಷಿ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಧಾನಿ ನರೇಂದ್ರ ಅವರ ನೇತೃತ್ವದ ಕೇಂದ್ರ ಸರ್ಕಾರ ಕೊಟ್ಟಷ್ಟು ಅನುದಾನಗಳು ಹಾಗೂ ಅಭಿವೃದ್ಧಿಗೆ ನೀಡಿದ ಬರಪೂರ ಕೊಡುಗೆಗಳನ್ನು ಈವರೆಗೂ ಯಾರೂ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೇಂದ್ರ ಸರ್ಕಾರದ ವಿರುದ್ಧ ಅನುದಾನ ತಾರತಮ್ಯ ಮಾಡುತ್ತಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದ ಮಾತ್ರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎನ್ನುವುದು ಕನ್ನಡಿಗರಿಗೂ ಅರಿವಿದೆ. ಕರ್ನಾಟಕದ ಖಜಾನೆ ಖಾಲಿ ಮಾಡಿ ದೆಹಲಿ ಚಲೋ ನಾಟಕ ಮಾಡಲು ಹೊರಟಿರುವ ಕಾಂಗ್ರೆಸ್ಸಿಗರೇ, ನಿಮ್ಮ ಕಪಟತನ ಬಯಲಾಗಿದೆ ಎಂದು ಕೆಲವು ಅಂಕಿ ಅಂಶಗಳನ್ನು ಪ್ರಕಟಿಸಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಕಾಂಗ್ರೆಸ್ ಕರ್ನಾಟಕವನ್ನು ಕಾಲಕಸದಂತೆ ಕಂಡಿತ್ತು ಎಂದು ಕಿಡಿಕಾರಿದ್ದಾರೆ.

ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಕರ್ನಾಟಕಕ್ಕೆ ನ್ಯಾಯ ದೊರೆತಿದ್ದು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ, ಜಲಜೀವನ್ ಮಿಷನ್ ಸಂಪರ್ಕ, ವಿಮಾನ ನಿಲ್ದಾಣಗಳು, ಮೆಟ್ರೋ ಸಂಪರ್ಕ, ರೈಲ್ವೆ ವಿದ್ಯುದ್ದೀಕರಣ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಪ್ರಧಾನಿ ಮೋದಿ ಸರ್ಕಾರ ಕರ್ನಾಟಕದಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ: ಬಿಜೆಪಿ ರಾಜ್ಯಾಧ್ಯಕ್ಷರ ಪ್ರತಿಭಟನೆ
ಜನ ವಿರೋಧಿ, ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ವತಿಯಿಂದ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.

ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ರಾಜ್ಯ ಸರ್ಕಾರವಾಗಿದ್ದು, ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ತಾರತಮ್ಯವೆಸಗಿರುವ ಬೇಜಾವಾಬ್ದಾರಿ ಸರ್ಕಾರದ ನಿಲುವುಗಳನ್ನು ಪ್ರತಿಭಟನಾ ನಿರತ ಬಿಜೆಪಿ ಮುಖಂಡರು ಖಂಡಿಸಿದರು. ಬೊಕ್ಕಸ ಬರಿದು ಮಾಡಿಕೊಂಡು ವಿಧಾನಸೌಧ ಖಾಲಿ ಮಾಡಿಕೊಂಡು ದೆಹಲಿ ಚಲೋ ನಾಟಕ ಮಾಡುತ್ತಿರುವ ಸರ್ಕಾರ ಮುಖ್ಯಮಂತ್ರಿಗಳ ಕಛೇರಿಗೆ ಬೀಗ ಜಡಿಯುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications