ಕರ್ನಾಟಕ ಕಸ ನಿರ್ವಹಣೆ ಮಾಫಿಯಾನೇ ಎನ್‌ಜಿಟಿ ದಂಡಕ್ಕೆ ಕಾರಣ: ಎಎಪಿ
ಬೆಂಗಳೂರು, ಅಕ್ಟೋಬರ್ 17: ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗುವ ಮೂಲಕ ರಾಜ್ಯ ಸರ್ಕಾರ ಕರ್ನಾಟಕದ ಹೆಸರಿಗೆ ಮಸಿ ಬಳಿದಿದೆ. ಹೀಗಾಗಿಯೇ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) 2,900 ಕೋಟಿ ರೂ. ದಂಡ ವಿಧಿಸಿದೆ ಎಂದು ಆಮ್ ಆದ್ಮಿ ಪಾರ್ಟಿ ಅಸಮಾಧಾನ ವ್ಯಕ್ತಪಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ (ಎಎಪಿ) ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಅವರು, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ 2014ರಲ್ಲೇ ಹಲವು ಕ್ರಮಗಳನ್ನು ಸೂಚಿಸಿದ್ದರೂ ರಾಜ್ಯ ಸರ್ಕಾರ ಅವುಗಳನ್ನು ಪಾಲಿಸಿಲ್ಲ. ಇದರಿಂದಾಗಿ ಸದ್ಯ ಬರೋಬ್ಬರಿ 2,900 ರೂಪಾಯಿ ದಂಡವನ್ನು ಸರ್ಕಾರ ಕಟ್ಟಬೇಕಾಗಿದೆ. ಇದರಿಂದ ಜನರ ಅಪಾರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಅವರು ವಿಷಾದಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ವು ರಾಜ್ಯ ಸರ್ಕಾರಕ್ಕೆ ವಿಧಿಸಿರುವ ದಂಡದ ಜೊತೆಗೆ ಈ ಹಿಂದೆ ಚಂದಾಪುರದ ಕೆರೆ ಹಾಳುಗೆಡವಿದ್ದಕ್ಕೆ ಹಾಕಿದ್ದ ದಂಡ ಮೊತ್ತದ ಸೇರಿಸಿದರೆ ಒಟ್ಟು 3,400 ಕೋಟಿ ರೂಪಾಯಿ ಆಗುತ್ತದೆ. ಸರ್ಕಾರದ ಎಡವಟ್ಟಿನಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಅವರು ಗುಡುಗಿದರು.

ನಿತ್ಯ ಸುಮಾರು 15,000 ಟನ್ ಘನತ್ಯಾಜ್ಯ ಉತ್ಪತ್ತಿ
ಕರ್ನಾಟಕ ರಾಜ್ಯದಲ್ಲಿ ಪ್ರತಿದಿನ ಸರಾಸರಿ 15,000 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪೈಕಿ ಸುಮಾರು 6,000ಟನ್ ತ್ಯಾಜ್ಯವು ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಇದನ್ನು ಬಯಲಿನಲ್ಲಿ ಸುರಿದು ನಿರ್ಲಕ್ಷ್ಯ ತೋರಲಾಗುತ್ತಿದೆ. ಸುಮಾರು 200 ಪ್ರದೇಶಗಳಲ್ಲಿ ವಿಲೇವಾರಿಯಾಗದೇ ಸುಮಾರು 180 ಲಕ್ಷ ಟನ್ ಕಸವು ಉಳಿದಿದೆ. ಜೊತೆಗೆ ಪ್ರತಿದಿನ ಸುಮಾರು 1,400 ಲೀಟರ್ ಕೊಳಚೆಯು ಶುದ್ಧೀಕರಣಗೊಳ್ಳದೇ ನೀರಿನ ಮೂಲಗಳನ್ನು ಸೇರುತ್ತಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ಎಎಪಿಯ ವಕೀಲರ ಘಟಕದ ಸದಸ್ಯ ಗಂಗಾಧರ್ ಮಾತನಾಡಿ, ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕಸ ನಿರ್ವಹಣೆಯು 1,500 ಕೋಟಿ ರೂ. ಹೆಚ್ಚಿನ ಮೊತ್ತದ ದಂಧೆಯಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಕರ್ನಾಟಕವು ಎನ್‌ಜಿಟಿಯಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗಿದೆ. ಎನ್‌ಜಿಟಿಯು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದ್ದಲ್ಲದೇ, ಕಸ ವಿಲೇವಾರಿಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿಗೆ ಎಂಬುದನ್ನು ವಿವರವಾಗಿ ತಿಳಿಸಿ ಎಂದು ಆದೇಶ ಹೊರಡಿಸಿದೆ ಎಂದರು.

ರಾಜ್ಯ ಸರ್ಕಾರವು ಎನ್‌ಜಿಟಿಯ ನಂಬಿಕೆಯನ್ನು ಉಳಿಸಿಕೊಂಡಿಲ್ಲ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾವೇ ಸ್ವತಃ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನು ಹೊತ್ತಿದ್ದಾರೆ. ಬೆಂಗಳೂರು ನಗರದ ಕಸ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಖಾತೆಯನ್ನು ತೊರೆಯಬೇಕೆಂದು ಒತ್ತಾಯಿಸಿದರು. ಅಲ್ಲದೇ ರಾಜ್ಯದ ಜನತೆಗೆ ಈ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications