ಎಸ್.ಎನ್.ಸುಬ್ಬರಾವ್ ಗೆ ಗಾಂಧಿ ಸೇವಾ ಪುರಸ್ಕಾರ
ಬೆಂಗಳೂರು, ಅ. 1 : ಮಧ್ಯಪ್ರದೇಶದ ಚಂಬಲ್ ಕಣಿವೆಯ ಡಕಾಯಿತರ ಮನಪರಿವರ್ತನೆ ಮಾಡಿ ಅವರನ್ನು ಮುಖ್ಯವಾಹಿನಿಗೆ ತಂದ ಗಾಂಧಿವಾದಿ ಡಾ. ಎಸ್. ಎನ್.ಸುಬ್ಬರಾವ್ ಅವರಿಗೆ ರಾಜ್ಯ ಸರ್ಕಾರದಿಂದ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ಮೊದಲ ಬಾರಿಗೆ ನೀಡಲಿರುವ 5 ಲಕ್ಷ ರೂ. ನಗದು ಒಳಗೊಂಡ ಪ್ರಶಸ್ತಿಯನ್ನು ಅಕ್ಟೋಬರ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. [ಗಾಂಧಿ ಶಾಂತಿ ಸೇವಾ ಪ್ರಶಸ್ತಿ ಆರಂಭಿಸಿದ ಸರ್ಕಾರ]

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ.ಶ್ರೀನಿವಾಸಯ್ಯ, ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಎಜಾಜುದ್ದೀನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಬಿ.ಟಿ.ಜಾಹ್ನವಿ, ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್.ವಿಶುಕುಮಾರ್ ಒಳಗೊಂಡ ಸಮಿತಿ ಸುಬ್ಬರಾವ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದರು.
12 ಜಿಲ್ಲೆಗೆ ಸಹಾಯವಾಣಿ ವಿಸ್ತರಣೆ
ಹಿರಿಯ ನಾಗರಿಕರ ಕುಂದು, ಕೊರತೆ ಆಲಿಸುವ ಸಹಾಯವಾಣಿ ಈಗಾಗಲೇ 14 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರವೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ವೃದ್ಧಾಶ್ರಮಗಳ ವಾರ್ಷಿಕ ಅನುದಾನವನ್ನು 1.96 ಲಕ್ಷ ರೂ. ದಿಂದ 8 ಲಕ್ಷ ರೂ.ಗೆ ಏರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಉಮಾಶ್ರೀ ತಿಳಿಸಿದ್ದಾರೆ. (ವೃದ್ಧರ ಸಹಾಯವಾಣಿ ಸಂಖ್ಯೆ: 1090)
ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸನ್ಮಾನ
ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 6 ಸಾಧಕರು ಮತ್ತು ಸಂಸ್ಥೆಯೊಂದಕ್ಕೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ಬುಧವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್. ಶಂಕರನಾರಾಯಣಾಚಾರ್ಯ (ಕಲಾಕ್ಷೇತ್ರ), ಹನುಮಂತ್ರಾಯ ಮನ್ನಪ್ಪ ಪೂಜಾರ (ಶಿಕ್ಷಣ), ಡಾ.ಎಂ.ಜಿ.ಕೃಷ್ಣಮೂರ್ತಿ (ಸಮಾಜ ಸೇವೆ), ಯಮನೂರೇಶ್ ಬಿರಾದರ್ (ಸಾಹಿತ್ಯ), ಪ್ರಮೀಳಾ ನಾಗರಾಜು (ಕ್ರೀಡಾ ಕ್ಷೇತ್ರ), ಲೀಲಾ ಆರ್. ಹಿರೇಮಠ (ಕಾನೂನು ಕ್ಷೇತ್ರ) ಹಾಗೂ ಮಡಿಕೇರಿಯ ಹಿರಿಯ ನಾಗರಿಕರ ವೇದಿಕೆಯನ್ನು ಸನ್ಮಾನಿಸಲಾಯಿತು.











Click it and Unblock the Notifications