NREGA: ನರೇಗಾ ಯೋಜನೆಯಡಿ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ? ಸಚಿವ ಮಾಹಿತಿ
ನರೇಗಾ ಯೋಜನೆಯಡಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ. ಈ ಬಗ್ಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ಅಂತಃಶಕ್ತಿ ಇರುವುದೇ ಗ್ರಾಮಗಳಲ್ಲಿ, ಗ್ರಾಮರಾಜ್ಯವೇ ರಾಮರಾಜ್ಯ ಎನ್ನುವುದು ಮಹಾತ್ಮ ಗಾಂಧಿಯವರ ಪ್ರಮುಖ ಸಂದೇಶಗಳಲ್ಲೊಂದು ಎಂದು ಪ್ರಿಯಾಂಕ್ ಹೇಳಿದ್ದಾರೆ.
ಇನ್ನು ನರೇಗಾ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ 30 ಲಕ್ಷ ಕುಟುಂಬಗಳ 54.15 ಲಕ್ಷ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಜೊತೆಗೆ 27,660 ವಿಶೇಷ ಚೇತನರಿಗೆ ನರೇಗಾ ಉದ್ಯೋಗ ಕಲ್ಪಿಸಿದ್ದು ಇನ್ನೊಂದು ವಿಶೇಷ ಸಾಧನೆ ಎಂದು ಅವರು ಶ್ಲಾಘಿಸಿದ್ದಾರೆ.

ನರೇಗಾ ಯೋಜನೆಯಲ್ಲಿ 68,256 ಎಕರೆ ತೋಟಗಾರಿಕಾ ಬೆಳೆ ಪ್ರದೇಶ ವಿಸ್ತರಣೆ ಮಾಡಲಾಗಿದೆ. ಗ್ರಾಮೀಣ ಮಕ್ಕಳ ಮತ್ತು ನರೇಗಾ ಕಾರ್ಮಿಕರ ಅನುಕೂಲಕ್ಕಾಗಿ ಕೂಸಿನ ಮನೆ, ಯುವ ಜನರ ಜ್ಞಾನಾರ್ಜನೆಗಾಗಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಅರಿವು ಕೇಂದ್ರಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಯೋಜನೆಯನ್ನು ಆದ್ಯತೆಯಾಗಿ ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 2,904 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ 4,57,982 ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆ ಮಾಡಲಾಗಿದೆ. ನೀರಿನ ಕಣ್ಗಾವಲಿಗಾಗಿ ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಜಾಲಾಮೃತ, ಪಂಚತಂತ್ರ, ಗ್ರಾಮ ವಿಕಾಸ, ಪ್ರಗತಿಪಥ ಸೇರಿದಂತೆ ಹಲವು ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿಗೆ ವೇಗ ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಬೌಗೋಳಿಕವಾಗಿ ಮತ್ತು ಸಾಮಾಜಿಕವಾಗಿ ಪ್ರತಿಯೊಬ್ಬರನ್ನೂ ಪಾಲುದಾರರನ್ನಾಗಿಸುವುದು ನಮ್ಮ ಸರ್ಕಾರದ ಆಶಯ. ಮಹಾತ್ಮ ಗಾಂಧಿಯವರ ಆಶಯದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮೀಣ ಕರ್ನಾಟಕವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ ನಮ್ಮ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಭವಿಷ್ಯ ರೂಪಿಸುತ್ತಿವೆ ಅರಿವು ಕೇಂದ್ರಗಳು: ಅರಿವು ಕೇಂದ್ರಗಳು ಈಗ ಬದುಕಿನ ಭರವಸೆಯ ಕೇಂದ್ರಗಳಾಗಿವೆ. ಭವಿಷ್ಯ ರೂಪಿಸುವ ಕೇಂದ್ರಗಳಾಗಿವೆ ಎಂದು ಪ್ರಿಯಾಂಕ್ ಹೇಳಿದ್ದಾರೆ. ಗ್ರಾಮೀಣ ಜನತೆಗೆ ಸುವ್ಯವಸ್ಥೆಯ, ಸುಸಜ್ಜಿತ ಅರಿವು ಕೇಂದ್ರಗಳ ಯೋಜನೆಯು ಫಲ ನೀಡಲು ಪ್ರಾರಂಭಿಸಿದ್ದು, ಗ್ರಾಮೀಣ ಪ್ರತಿಭೆಗಳಿಗೆ ನೀರೆರೆಯುವ ಕೇಂದ್ರಗಳಾಗಿವೆ ಎಂದಿದ್ದಾರೆ.
ಪ್ರಧಾನಪುರ ಗ್ರಾಮ ಪಂಚಾಯಿತಿಯ ಯುವಕ ಅರಿವು ಕೇಂದ್ರಗಳಲ್ಲಿ ದೊರೆಯುವ ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ನಿಯತಕಾಲಿಕೆಗಳ ಲಾಭ ಪಡೆದು, ಪೊಲೀಸ್ ಇಲಾಖೆಯ ನೌಕರಿಗೆ ಆಯ್ಕೆಯಾಗಿರುವುದು ಸಂತಸದ ಮೂಡಿಸಿದೆ. ಈ ಪ್ರತಿಭಾವಂತ ಯುವಕನಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.
ಅರಿವು ಕೇಂದ್ರಗಳಿಂದಾಗಿ ನೌಕರಿ ಪಡೆಯುತ್ತಿರುವ ಯುವ ಸಮುದಾಯಕ್ಕೆ ಕೋಚಿಂಗ್ ಸೆಂಟರ್‌ಗಳ ದುಬಾರಿ ಖರ್ಚು ಉಳಿತಾಯವಾಗುತ್ತದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಹಣ ನೀಡಿ ಖರೀದಿಸುವ ಕಷ್ಟವೂ ಇಲ್ಲವಾಗಿದೆ. ತಾವು ಇದ್ದಲ್ಲಿಯೇ ಜ್ಞಾನಧಾರೆ ಎರೆಯುವ ಅರಿವು ಕೇಂದ್ರಗಳಿಂದ ಯುವ ಸಮುದಾಯ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಪ್ರಯೋಜನ ಪಡೆದರೆ, ಅದಕ್ಕಿಂತ ಸಾರ್ಥಕತೆ ಇನ್ನೊಂದಿಲ್ಲ. ಅದಕ್ಕಿಂತ ಸಂತೋಷವೂ ಬೇರೊಂದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications