ವರುಣಾದಿಂದ ಹಿಂದೆ ಸರಿದ ವಿಜಯೇಂದ್ರ: ಸಿದ್ದು ಬಗ್ಗೆ ಕಾಳಜಿ? ಪುತ್ರನ ಭವಿಷ್ಯದ ಬಗ್ಗೆ ಆತಂಕ? ಬಿಎಸ್‌ವೈಗೆ ಕಾಡಿದ್ದೇನು?
ಬೆಂಗಳೂರು, ಏಪ್ರಿಲ್ 01: ಕರ್ನಾಟಕದ ವಿಧಾನಸಭೆಗೆ ಚುನಾವಣೆ ( Karnataka Assembly Elections 2023 ) ದಿನಾಂಕಗಳು ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ವಿರುದ್ಧ ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರರನ್ನು ನಿಲ್ಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರು ( BS Yediyurappa ) ಸಮ್ಮತಿ ಸೂಚಿಸದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಎಸ್‌ವೈ ಹೇಳಿದ್ದೇನು?
ವಿಜಯೇಂದ್ರ ಅವರನ್ನು ವರುಣಾದಿಂದ ಕಣಕ್ಕಿಳಿಸಲು ಈಗಾಗಲೇ ಒತ್ತಡವಿದೆ. ಒತ್ತಡವಿದ್ದರೂ ಶಿಕಾರಿಪುರದಿಂದ ಸ್ಪರ್ಧಿಸಬೇಕು ಎಂದು ಬಹಳ ಹಿಂದೆಯೇ ಹೇಳಿದ್ದೆ, ಹಾಗಾಗಿ ವಿಜಯೇಂದ್ರ ವರುಣಾದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ವಿಜಯೇಂದ್ರ ನನ್ನ ಕ್ಷೇತ್ರದಿಂದ ( ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ) ಸ್ಪರ್ಧಿಸಲಿದ್ದಾರೆ, ಹೀಗಾಗಿ ವರುಣಾದಿಂದ ಸ್ಪರ್ಧಿಸುವಂತೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಸ್ವಂತ ಬಲವಿದೆ, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, 'ಅವರ ಹೇಳಿಕೆ ಸರಿಯಾಗಿದೆ, ಆದರೆ ನಾನು ಶಿಕಾರಿಪುರದಿಂದ ಸ್ಪರ್ಧಿಸಬೇಕೆಂದು ಹೇಳಿದ್ದೇನೆ. ಅದನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಹೀಗಾಗಿ, ವಿಜಯೇಂದ್ರ ಅವರು ಮೈಸೂರಿನ ವರುಣಾದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧಿಸಲು ಹೈಕಮಾಂಡ್ ಸಹ ಒಪ್ಪಿಗೆ ನೀಡಿತ್ತು. ಆದರೆ, ನಾನೇ ಸಮ್ಮತಿ ನೀಡಿಲ್ಲವೆಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ರಬಲ ಲಿಂಗಾಯತ ನಾಯಕರಾಗಿರುವ ಬಿಎಸ್‌ವೈ ಹೀಗೆ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದೆ.
ಬಿಎಸ್‌ವೈಗೆ ಕಾಡಿತೇ ಪುತ್ರನ ಭವಿಷ್ಯದ ಬಗ್ಗೆ ಆತಂಕ?
ವಿಜಯೇಂದ್ರ ಅವರು ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ದುಮುಕಿದ್ದಾರೆ. ಒಂದು ವೇಳೆ, ರಾಜ್ಯದ ಅತ್ಯಂತ ಬಲಿಷ್ಠ ನಾಯಕ ಸಿದ್ದರಾಮಯ್ಯನವರ ಎದುರು ಸ್ಪರ್ಧೆ ಮಾಡಿ ಗೆಲುವು ಸಾಧಿಸುವುದು ತೀರಾ ಕಷ್ಟದ ಕೆಲಸವೆಂದೇ ಹೇಳಲಾಗುತ್ತಿದೆ.
ವಿಜಯೇಂದ್ರ ಅವರು ವರುಣಾದಲ್ಲಿ ನಿಂತು ಸೋತರೆ, ಅದು ಅವರ ರಾಜಕೀಯ ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರಲಿರುವುದಂತೂ ಶತಸಿದ್ಧವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯಲ್ಲಿಯೇ ಇರುವ ಬಿಎಸ್‌ವೈ ವಿರೋಧಿ ಬಣದ ಬಾಯಿಗೆ ವಿಜಯೇಂದ್ರ ಸೋಲು ತುತ್ತಾಗಬಹುದು ಎಂಬ ಆತಂಕವೂ ಬಿಎಸ್‌ವೈಗೆ ಕಾಡಿರಬಹುದು ಎಂದು ಹೇಳಲಾಗುತ್ತಿದೆ.

ಸ್ನೇಹಿತ ಸಿದ್ದು ಬಗ್ಗೆ ಕಾಳಜಿ?
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರು ಬೇರೆಬೇರೆ ಪಕ್ಷಗಳಲ್ಲಿ ಇದ್ದರೂ, ಅವರು ವೈರಿಗಳಂತೆ ಎಂದಿಗೂ ನಡೆದುಕೊಂಡಿಲ್ಲ. ಅವರು ರಾಜಕೀಯವಾಗಿ ವಾಗ್ದಾಳಿ ಪ್ರತಿವಾಗ್ದಾಳಿಗಳನ್ನು ನಡೆಸಿದ್ದರೂ, ವೈಯುಕ್ತಿಕವಾಗಿ ಸೌಜನ್ಯಯುತ ಸಂಬಂಧವನ್ನು ಹೊಂದಿದವರು. ಈಗಾಗಲೇ ಸಿದ್ದರಾಮಯ್ಯನವರು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಕಷ್ಟವಾಗಬಾರದು ಎಂದು ಬಿಎಸ್‌ವೈ ಯೋಚಿಸಿರಬಹುದು ಎಂದೂ ಹೇಳಲಾಗುತ್ತಿದೆ. ಮುನ್ನೆಲೆಗೆ ಬಂದಿರುವ ಈ ಎಲ್ಲ ಪ್ರಶ್ನೆಗಳಿಗೂ ಯಡಿಯೂರಪ್ಪನವರೇ ಉತ್ತರಿಸಬೇಕಿದೆ.
ಕರ್ನಾಟಕ ಚುನಾವಣೆ ಮೇ 10 ರಂದು ನಡೆಯಲಿದ್ದು, 13 ರಂದು ಫಲಿತಾಂಶಗಳು ಹೊರಬೀಳಲಿವೆ. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರಿದೆ. ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಂದಿನ ವಾರದಲ್ಲಿ ಕಾಂಗ್ರೆಸ್‌ನ ಎರಡನೇ ಪಟ್ಟಿ ಹೊರಬೀಳಲಿದೆ.












Click it and Unblock the Notifications