ವಿ. ಸೋಮಣ್ಣ ಹಿನ್ನಡೆ; ಬೆಂಗಳೂರು ಬಿಟ್ಟು ತಪ್ಪು ಮಾಡಿದ್ರಾ?
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ವಸತಿ ಸಚಿವ ವಿ. ಸೋಮಣ್ಣ ಎರಡೂ ಕ್ಷೇತ್ರಗಳಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಪ್ರಾಥಮಿಕ ಹಂತದಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರಾಗಿರುವ ವಿ. ಸೋಮಣ್ಣ ಹಿನ್ನಡೆಯಲ್ಲಿದ್ದಾರೆ.

ಬಿಜೆಪಿಯ ವರಿಷ್ಠರ ಸೂಚನೆಯಂತೆ ವಿ. ಸೋಮಣ್ಣ ಚಾಮರಾಜನಗರ ಮತ್ತು ಮೈಸೂರಿನ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ 9 ಸಾವಿರ ಮತಗಳ ಅಂತರದಲ್ಲಿ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ಮುನ್ನಡೆ ಪಡೆದಿದ್ದಾರೆ.
ವಿ. ಸೋಮಣ್ಣ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ. ಆದರೆ ಅಲ್ಲಿ ಅವರು 2,710 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಮತ ಎಣಿಕೆ ಕೇಂದ್ರದಿಂದಲೇ ಅವರು ಹೊರ ನಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ನಗರದ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣ ಬೆಂಗಳೂರು ಬಿಟ್ಟು ತಪ್ಪು ಮಾಡಿದರೇ? ಎಂಬ ಪ್ರಶ್ನೆ ಎದ್ದಿದೆ. ವರಿಷ್ಠರು ಹೇಳಿದಂತೆ ಬೆಂಗಳೂರು ಬಿಟ್ಟು ಎರಡು ಕಡೆ ಹೋಗಿ ಅವರು ಚುನಾವಣೆಗೆ ನಿಂತಿದ್ದರು. ಆದರೆ ಈಗ ಎರಡೂ ಕಡೆ ಹಿನ್ನಡೆ ಅನುಭವಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ವಿ. ಸೋಮಣ್ಣ ಗೆಲುವು ಸಾಧಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದರು.
ಕರ್ನಾಟಕದ ಸಂಪೂರ್ಣ ಫಲಿತಾಂಶ ನೋಡುವುದಾದರೆ 10.18ರ ಮಾಹಿತಿಯಂತೆ ಕಾಂಗ್ರೆಸ್ 110, ಬಿಜೆಪಿ 83, ಜೆಡಿಎಸ್ 26 ಮತ್ತು ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications