ಇನ್ನೂ ಜೀವಂತವಾಗಿದೆ ಅತಂತ್ರದ ಆಸೆ: ಗೆಲ್ಲಬಹುದಾದ ಅಭ್ಯರ್ಥಿಗಳೊಂದಿಗೆ ದೇವೇಗೌಡರ ಸಂಪರ್ಕ
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುಣಾವಣೆಗೆ ಫಲಿತಾಂಶ ಇಂದು ಹೊರಬರುತ್ತಿದೆ. ಕಾಂಗ್ರೆಸ್ ಮುನ್ನಡೆ ಕಾಪಾಡಿಕೊಂಡಿದೆ. ಆದರೂ, ಮ್ಯಾಜಿಕ್ ನಂಬರ್ ದಾಟಿಲ್ಲ. ಇದು ಜೆಡಿಎಸ್‌ಗೆ ಅತಂತ್ರ ಫಲಿತಾಂಶದ ಆಸೆಯನ್ನು ಇನ್ನು ಜೀವಂತವಾಗಿರಿಸಿದೆ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಪಕ್ಷದ ಗೆಲ್ಲುವ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು ಪಕ್ಷಾಂತರ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರನ್ನು ಕೈಬಿಡದಂತೆ ಎಲ್ಲಾ ಗೆಲ್ಲುವ ಅಭ್ಯರ್ಥಿಗಳು ಮತ್ತು ಹಾಲಿ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದು ಗೌಡರ ಆಪ್ತ ಮೂಲಗಳು 'ಡೆಕ್ಕನ್ ಹೆರಾಲ್ಡ್'ಗೆ ಖಚಿತಪಡಿಸಿವೆ. ಜೆಡಿಎಸ್ ಸರ್ಕಾರ ರಚಿಸಿದರೆ ಗೆಲ್ಲುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಗೌಡರು ಭರವಸೆ ನೀಡಿದ್ದಾರೆ.

ಗುರುವಾರ ಮತ್ತು ಶುಕ್ರವಾರ ರಾತ್ರಿ ಗೌಡರು ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿಟಿ ದೇವೇಗೌಡರ ಜತೆ ಸಭೆ ನಡೆಸಿದ ಅವರು, ಮೈಸೂರು ಭಾಗದ ಅಭ್ಯರ್ಥಿಗಳ ಮೇಲೆ ನಿಗಾ ಇಡುವ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಅದೇ ರೀತಿ ಹಾಸನ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸುವಂತೆ ಗೌಡರು ತಮ್ಮ ಪುತ್ರ ಹಾಗೂ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಸೂಚಿಸಿದ್ದಾರೆ.
'2019 ರಲ್ಲಿ ನಾವು ಆಪರೇಷನ್ ಕಮಲದಿಂದ ಮೂವರು ಶಾಸಕರನ್ನು ಕಳೆದುಕೊಂಡಿದ್ದೇವೆ. ಈ ಬಾರಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಗೌಡ ಅವರೇ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾರೆ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
2019 ರಲ್ಲಿ ಜೆಡಿಎಸ್ ಶಾಸಕರಾದ ಕೆ ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಎಚ್ ವಿಶ್ವನಾಥ್ (ಹುಣಸೂರು) ಮತ್ತು ಕೆ ಸಿ ನಾರಾಯಣ ಗೌಡ (ಕೆ ಆರ್ ಪೇಟೆ) ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.












Click it and Unblock the Notifications