ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತರಿಗೆ ಸಿಎಂ ಪಟ್ಟ: ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಸೂಚನೆ?!

|
Google Oneindia Kannada News

ಮೈಸೂರು, ಮೇ 14: 'ದಲಿತರಿಗೆ ಸಿಎಂ ಪಟ್ಟ ನೀಡಲು ಹೈಕಮಾಂಡ್ ನಿರ್ಧರಿಸುವುದಾದರೆ ನಾನು ಸಿಎಂ ಕುರ್ಚಿ ಬಿಟ್ಟುಕೊಡಲು ಸಿದ್ಧ' ಎಂಬ ಸಿದ್ದರಾಮಯ್ಯ ಮಾತಿನ ಅರ್ಥವೇನು?

ಮತದಾನದವರೆಗೂ ತಾವೇ ಸಿಎಂ ಎಂದು ಪೂರ್ಣ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಮನಸ್ಸು ಮತದಾನದ ನಂತರ ಕೊಂಚ ಒದ್ದಾಡುತ್ತಿರುವುದೇಕೆ..? ತಾವು ಖುರ್ಚಿ ಬಿಡಲು ಸಿದ್ಧ ಎನ್ನುವ ಮೂಲಕ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆಯೇ ಸಿದ್ದರಾಮಯ್ಯ..?

ದಲಿತ ಮುಖ್ಯಮಂತ್ರಿಗೆ ಕುರ್ಚಿ ಬಿಟ್ಟುಕೊಡಲು ಹೊರಟ ಸಿದ್ದರಾಮಯ್ಯ!ದಲಿತ ಮುಖ್ಯಮಂತ್ರಿಗೆ ಕುರ್ಚಿ ಬಿಟ್ಟುಕೊಡಲು ಹೊರಟ ಸಿದ್ದರಾಮಯ್ಯ!

ಸಿದ್ದರಾಮಯ್ಯ ಅವರ ಹೇಳಿಕೆಯ ನಂತರ ಜನಸಾಮಾನ್ಯನ ನಿದ್ದೆಕೆಡಿಸಿರುವ ಪ್ರಶ್ನೆಗಳಿವು. ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಚಿತ್ರಣ ನೀಡಿದ್ದರೆ, ಕೆಲವು ಬಿಜೆಪಿ ಮೇಲುಗೈ ಎಂದಿವೆ. ಚುನಾವಣೆಗೂ ಮುನ್ನ ಪೂರ್ಣ ಬಹುಮತದ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಇದೀಗ ಮೈತ್ರಿ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಂತಿದೆ.

'ದಲಿತ ಎಂಬ ಕಾರಣಕ್ಕೆ ಸಿಎಂ ಪದವಿಗೇರಲು ಇಷ್ಟವಿಲ್ಲ' 'ದಲಿತ ಎಂಬ ಕಾರಣಕ್ಕೆ ಸಿಎಂ ಪದವಿಗೇರಲು ಇಷ್ಟವಿಲ್ಲ'

'ಈ ಬಾರಿಯೂ ನಾನೇ ಸಿಎಂ' ಎಂದು ಮೂರು ಬಾರಿ ಉಚ್ಚರಿಸಿದ್ದ ಸಿದ್ದರಾಮಯ್ಯ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಹುದ್ದೆ ಸಿಕ್ಕುತ್ತಿಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ಸಾಕಿ ಬೆಳೆಸಿದ್ದ ಜೆಡಿಎಸ್ ಪಕ್ಷವನ್ನು ತೊರೆದು ಬಂದ ಸಿದ್ದರಾಮಯ್ಯ, ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಹೈಕಮಾಂಡ್ ಅನ್ನೇ ತಮ್ಮ ಬಿಗಿಮುಷ್ಠಿಯಲ್ಲಿಟ್ಟುಕೊಂಡಿದ್ದ ಸಿದ್ದರಾಮಯ್ಯ ಇಂಥ ಹೇಳಿಕೆ ನೀಡುವುದು ರಾಜಕೀಯ ವಲಯದಲ್ಲಿ ಸಾಕಷ್ಟು ತಲ್ಲಣ ಎಬ್ಬಿಸಿದೆ.

ಜೆಡಿಎಸ್ ಜೊತೆ ಮೈತ್ರಿ ಸೂಚನೆ?

ಜೆಡಿಎಸ್ ಜೊತೆ ಮೈತ್ರಿ ಸೂಚನೆ?

ಸಂಪೂರ್ಣ ಬಹುಮತ ಪಡೆಯದಿದ್ದರೂ ಕಾಂಗ್ರೆಸ್ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಬಹುದು. ಆದರೆ ಬಿಜೆಪಿಗಾಗಲೀ, ಕಾಂಗ್ರೆಸ್ಸಿಗಾಗಲೀ ಆಗ ಜೆಡಿಎಸ್ ಬೆಂಬಲ ಬೇಕೇ ಬೇಕು. ಚುನಾವಣೆ ಆರಂಭವಾದಾಗಿನಿಂದಲೂ 'ಕಿಂಗ್ ಮೇಕರ್' ಎಂಬ ಉಪಮೇಯ ಅಂಟಿಸಿಕೊಂಡಿರುವ ಜೆಡಿಎಸ್ ಮುಂದೆ, 'ಕಾಂಗ್ರೆಸ್ ಅಥವಾ ಬಿಜೆಪಿ' ಎಂಬ ಆಯ್ಕೆ ಎದುರಾದರೆ ಆರಿಸಿಕೊಳ್ಳುವುದು ಬಿಜೆಪಿಯನ್ನೇ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಜೆಡಿಎಸ್ ಕಾಂಗ್ರೆಸ್ ಜೊತೆ ಕೈಜೋಡಿಸಲು ಇರುವ ಏಕೈಕ ಅಡೆತಡೆ ಎಂದರೆ 'ಸಿದ್ದರಾಮಯ್ಯ.' ಈ ಮೊದಲು ಜೆಡಿಎಸ್ ಪರೋಕ್ಷವಾಗಿ, 'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಿಲ್ಲ ಎಂದಾದರೆ ಕಾಂಗ್ರೆಸ್ಸಿಗೆ ಬೆಂಬಲ ನೀಡಲು ತಾನು ಸಿದ್ಧ' ಎಂದು ಹಲವು ಬಾರಿ ಹೇಳಿದೆ. ಅಂದರೆ ಜೆಡಿಎಸ್ ಜೊತೆ ಕೈಜೋಡಿಸುವುದಕ್ಕಾಗಿ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಪಟ್ಟ ತೊರೆಯುತ್ತಿದ್ದಾರಾ? ದಲಿತ ಸಿಎಂ ಎಂಬುದು ಅದಕ್ಕೊಂದು ನೆಪವಾ..? ಎಂಬ ಅನುಮಾನವೂ ಎದ್ದಿದೆ.

ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು? ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು?

ದಲಿತ ಸಿಎಂ ರೇಸ್ ನ ಮೊದಲ ಹೆಸರು ಪರಂ

ದಲಿತ ಸಿಎಂ ರೇಸ್ ನ ಮೊದಲ ಹೆಸರು ಪರಂ

'ದಲಿತ' ಸಿಎಂ ಗಾದಿಯಲ್ಲಿರುವ ಮೊಟ್ಟ ಮೊದಲ ಹೆಸರು ಡಾ.ಜಿ.ಪರಮೇಶ್ವರ್. 2013 ರಲ್ಲಿ ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಇಷ್ಟರಲ್ಲಿ ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿರುತ್ತಿದ್ದರು! ಆದರೆ ತುಮಕೂರಿನ ಕೊರಟೆಗೆರೆಯ ತಮ್ಮ ಕ್ಷೇತ್ರದಲ್ಲಿ ಪರಮೇಶ್ವರ್ ಅಚ್ಚರಿಯ ಸೋಲುಂಡರು. ಇದು ಸಿದ್ದರಾಮಯ್ಯ ಮುಖ್ಯಮಂತ್ರಿ ಹಾದಿಯಲ್ಲಿದ್ದ ಏಕೈಕ ಮುಳ್ಳನ್ನೂ ನಿರಾಯಾಸವಾಗಿ ಆಚೆ ಇರಿಸಿತ್ತು. ಪರಮೇಶ್ವರ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಮಾತು ಆ ಸಂದರ್ಭದಲ್ಲಿ ಕೇಳಿಬಂದಿತ್ತು. ಆದರೆ ಈ ಬಾರಿ ಹಾಗಿಲ್ಲ.

ಗೆಲ್ಲಲೇಬೇಕೆಂಬ ಪಣತೊಟ್ಟಿರುವ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಪ್ರಚಾರಕ್ಕಾಗಿ ಹೆಚ್ಚೆಲ್ಲೂ ಹೋಗದೆ ಕೊರಟಗೆರೆಯಲ್ಲೇ ನಿರಂತರವಾಗಿ ಬೆವರು ಸುರಿಸಿ ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಕಳೆದ ಬಾರಿ ಸಿಎಂ ಪಟ್ಟದಿಂದ ವಂಚಿತರಾದರಲ್ಲ ಎಂಬ ಅನುಕಂಪವೂ ಅವರನ್ನು ಗೆಲ್ಲಿಸಬಹುದು. ಪರಮೇಶ್ವರ್ ಅವರು ಗೆಲ್ಲಲಿ ಎಂಬ ಕಾರಣಕ್ಕೇ ಬಿಜೆಪಿಯೂ ಪ್ರಬಲ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿಲ್ಲ!

ಸಿಎಂ ರೇಸ್ ನಲ್ಲಿ ಖರ್ಗೆ ಹೆಸರು..?

ಸಿಎಂ ರೇಸ್ ನಲ್ಲಿ ಖರ್ಗೆ ಹೆಸರು..?

ಕಾಂಗ್ರೆಸ್ಸಿನ ಹೈಕಮಾಂಡಿನ ಪ್ರಭಾವಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಿರಿಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಅವರೂ ದಲಿತ ಸಿಎಂ ರೇಸ್ ನಲ್ಲಿದ್ದಾರಾ? ದಲಿತರನ್ನೇ ಸಿಎಂ ಮಾಡುವುದಾದರೆ ಅವರತ್ತಲೂ ಹೈಕಮಾಂಡ್ ಚಿತ್ತ ನೆಟ್ಟರೆ ಅಚ್ಚರಿಯಿಲ್ಲ. ಈ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದ ಖರ್ಗೆ, "ನನ್ನ ಸಾಮರ್ಥ್ಯ ನೋಡಿ, ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ ಎಂಬುದನ್ನು ಮನಗಂಡು ನನಗೆ ಸಿಎಂ ಪದವಿ ನೀಡುವುದಾದರೆ ನೀಡಲಿ. ಕೇವಲ ದಲಿತ ಎಂಬ ಕಾರಣಕ್ಕೆ ಕೊಡುವುದಾದರೆ ನಾನು ಆ ಸ್ಥಾನಕ್ಕೆ ಎಂದಿಗೂ ಅರ್ಜಿ ಹಾಕಿಲ್ಲ, ಹಾಕೋಲ್ಲ" ಎಂದಿದ್ದಾರೆ.

ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯ ರಾಜಕಾರಣಕ್ಕೆ ಕಳುಹಿಸಿಬಿಡುವ ಸಂಭವ ಕಡಿಮೆ. ಏಕೆಂದರೆ ಕೇಂದ್ರದಲ್ಲಿ ವಿಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಖರ್ಗೆ ಹೆಸರು ಅಗ್ರಪಂಕ್ತಿಯಲ್ಲಿದೆ. ಖರ್ಗೆ ರಾಜ್ಯಕ್ಕೆ ಬಂದುಬಿಟ್ಟರೆ ಆ ಸ್ಥಾನವನ್ನು ತುಂಬುವ ನಾಯಕರು ಯಾರೂ ಇಲ್ಲ. ಹೀಗಿರುವಾಗ ಅವರನ್ನು ಬಿಟ್ಟುಕೊಡಲು ಹೈಕಮಾಂಡ್ ಒಪ್ಪದಿರಬಹುದು. ಒಂದೊಮ್ಮೆ ಜಿ.ಪರಮೇಶ್ವರ್ ಸೋತು, ದಲಿತ ಮುಖ್ಯಮಂತ್ರಿಯನ್ನೇ ಪಟ್ಟಕ್ಕೆ ತರುವಂತೆ ಒತ್ತಡ ಸೃಷ್ಟಿಯಾದರೆ ಆಗ ಖರ್ಗೆ ಅದೃಷ್ಟ ಕುಲಾಯಿಸೀತು.

ಈ ಹೇಳಿಕೆಯ ಹಿಂದಿರುವ ಮರ್ಮವೇನು?

ಈ ಹೇಳಿಕೆಯ ಹಿಂದಿರುವ ಮರ್ಮವೇನು?

ಚಾಮುಂಡೇಶ್ವರಿ ಸಿದ್ದರಾಮಯ್ಯ ಅವರಿಗೆ ಸೇಫ್ ಅಲ್ಲ ಎಂದು ಗುಪ್ತಚರ ವರದಿಯೊಂದು ಹೇಳುತ್ತಿದ್ದಂತೆಯೇ, ಸೋತರೆ ಎಲ್ಲಿ ಸಿಎಂ ಪದವಿ ಕೈತಪ್ಪುತ್ತದೋ ಎಂದು ಬಾದಾಮಿಯನ್ನೂ ಬ್ಯಾಕ್ ಅಪ್ ಆಯ್ಕೆಯನ್ನಾಗಿ ಆರಿಸಿಕೊಂಡವರು ಸಿದ್ದರಾಮಯ್ಯ. ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಈ ಬಾರಿಯೂ ಸೋಲಿಸಲು ಕಾಂಗ್ರೆಸ್ಸಿನ ಕೆಲ ನಾಯಕರೇ ಪಟ್ಟುಹಿಡಿದಿದ್ದಾರೆ, ಅದಕ್ಕೆಂದೇ ಕಾಂಗ್ರೆಸ್ಸಿನ ಹಲವು ಕಾರ್ಯಕರ್ತರೇ ಕೊರಟಗೆರೆಗೆ ತೆರಳಿ ಕಾಂಗ್ರೆಸ್ಸಿಗೆ ಮತಹಾಕಬೇಡಿ ಎಂದು ಕೇಳಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಜಿ ಪರಮೇಶ್ವರ್ ಅವರು ಸೋಲುವುದರಿಂದ ಯಾರಿಗೆ ಲಾಭ? ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ 'ನಾನೇ ಮುಂದಿನ ಸಿಎಂ' ಎಂದಿದ್ದ ಸಿದ್ದರಾಮಯ್ಯ ಮಾತು ಬದಲಿಸುತ್ತಿರುವುದು ಏಕೆ? ಮುಂದಿನ ಬಾರಿಯೂ ದಸರದಲ್ಲಿ ನಾಡದೇವಿಯ ಪೂಜೆ ಮಾಡುವವನು ನಾನೇ ಎಂದಿದ್ದ ಸಿದ್ದರಾಮಯ್ಯ ಅವರ ವಿಶ್ವಾಸ ಈಗ ಎಲ್ಲಿ ಹೋಯ್ತು? ಅತಂತ್ರ ವಿಧಾನಸಭೆಯ ಭಯ ಅವರನ್ನು ಕಾಡಿದಂತಿದೆ. ಒಟ್ಟಿನಲ್ಲಿ ರಾಜ್ಯದ ಹಣೆ ಬರಹ ಏನಾಗಲಿದೆ ಎಂಬುದು ನಾಳೆ(ಮೇ 15) ತಿಳಿಯಲಿದೆ.

ರಾಜಕೀಯದ ದಾಳವಾದ 'ದಲಿತ' ಮುಖ್ಯಮಂತ್ರಿ!

ರಾಜಕೀಯದ ದಾಳವಾದ 'ದಲಿತ' ಮುಖ್ಯಮಂತ್ರಿ!

ಇದೆಂಥದು ಇದು? ಸಾಮರ್ಥ್ಯ ನೋಡಿ ಮುಖ್ಯಮಂತ್ರಿಯನ್ನು ಆರಿಸುವುದನ್ನು ಬಿಟ್ಟು ಜಾತಿಯ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಆರಿಸುವುದು ಯಾವ ಲೆಕ್ಕಾಚಾರ ಎಂದು ಜನಸಾಮಾನ್ಯನಿಗೆ ಅನ್ನಿಸಿದರೆ ಅಚ್ಚರಿಯಿಲ್ಲ. ಆದರೆ ಕರ್ನಾತಕದ ರಾಜಕಾರಣ ನಡೆಯುತ್ತಿರುವುದೇ ಜಾತಿಯ ಮೇಲೆ ಎಂಬುದು ದುರಂತವಾದರೂ ಸತ್ಯ! ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಇಬ್ಬರು ಉಪಮುಖ್ಯಮಂತ್ರಿಯರನ್ನು ಆರಿಸಿದ್ದು ಸಹ(ಕೆ.ಎಸ್.ಈಶ್ವರಪ್ಪ, ಆರ್ ಅಶೋಕ್) ಇದೇ ಜಾತಿಯ ಓಲೈಕೆಗೆ. ಚುನಾವಣೆಯ ಸಮಯದಲ್ಲಿ ಲಿಂಗಾಯತ ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದಕ್ಕೆ ಹೊರಟಿದ್ದೂ ಜಾತಿ ಓಲೈಕೆಗೆ! ಇಂತಿಪ್ಪ ಕರ್ನಾಟಕದಲ್ಲಿ 'ದಲಿತ ಮುಖ್ಯಮಂತ್ರಿ'ಯ ಹೊಸ ವರಸೆ ಎದ್ದಿರುವುದೂ ಇದೇ ಕಾರಣಕ್ಕೆ.ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದಕ್ಕೆಂದು ಜಾತಿ ಒಂದು ದಾಳವಾಗಿರುವುದು ಕರ್ನಾಟಕದ ದುರಂತವೇ ಸರಿ!

English summary
Karnataka assembly elections 2018: CM Siddaramaiah told, if Congress high command wants to appoint a Dalit chief minister in Karnataka i will support the decision" Political experts doubted, by this statement Siddaramaiah is giving hints of joining hands with political rival JDS in the case of hung assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X