ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು, ನಿವೃತ್ತಿಯಾದವರ ಪಟ್ಟಿ ಹೊರಬರುತ್ತಿದೆ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ವಿಧಾನಸಭೆ ಚುನಾವಣೆಯು ( Karnataka Elections 2023 ) ಮೇ 10 ರಂದು ನಡೆಯಲಿದ್ದು, ಮೂರು ದಿನಗಳ ಬಳಿಕ ಫಲಿತಾಂಶ ಹೊರಬರಲಿದೆ. ಈಗಾಗಲೇ ಕಾಂಗ್ರೆಸ್ ( Congress ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ, 166 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಜೆಡಿಎಸ್ ( JDS ) ತನ್ನ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಪ್ರಕಟಿಸಿದೆ.
ಆದರೆ, ಬಿಜೆಪಿ ( BJP ) ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಇದೇ ವೇಳೆಯಲ್ಲಿ, ಬಿಜೆಪಿಯ ಹಲವು ನಾಯಕರು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿರುವುದು ಹಲವು ಶಂಕೆಗಳನ್ನು ಹುಟ್ಟು ಹಾಕಿದೆ.

ಈ ವಿಚಾರದ ಕುರಿತು ವ್ಯಂಗ್ಯವಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು, ನಿವೃತ್ತಿಯಾದವರ ಪಟ್ಟಿ ಹೊರಬರುತ್ತಿದೆ' ಎಂದು ಹೇಳಿದೆ.
'ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ. ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ. ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಕೆಎಸ್ ಈಶ್ವರಪ್ಪ ಈಗ ಟಿಕೆಟ್‌ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು' ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
'ಬಸವರಾಜ ಬೊಮ್ಮಾಯಿ ಅವರು ವರ್ಷ ಪೂರ್ತಿ ದೆಹಲಿಗೆ ಅಲೆದರೂ ಸಂಪುಟ ರಚನೆಗೆ ಅನುಮತಿ ದೊರಕಲಿಲ್ಲ. ಈಗ ಮೂರು ದಿನ ಸಭೆ ನಡೆಸಿದರೂ ಒಂದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಲಾಗಲಿಲ್ಲ. ಇದಕ್ಕೇ ಅಲ್ಲವೇ ನಾವು #PuppetCM ಎನ್ನುವುದು. ಇಂತಹ RSS ಕೈಗೊಂಬೆಯಾಗಿರುವ ಬಿಜೆಪಿ ಪಕ್ಷದಿಂದ ಕರ್ನಾಟಕದ ಹಿತ ಕಾಯಲು ಸಾಧ್ಯವೇ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ
ಕರ್ನಾಟಕದ ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರು ಮಂಗಳವಾರ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. ಕನ್ನಡದಲ್ಲಿ ಬರೆದಿರುವ ಸಂಕ್ಷಿಪ್ತ ಪತ್ರದಲ್ಲಿ, ತಮ್ಮ ನಿರ್ಧಾರವು ಸ್ವಂತ ಇಚ್ಛೆಯಿಂದ ಬಂದಿದ್ದು ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆಗಳಿಂದ ಆಗಾಗ್ಗೆ ವಿವಾದಗಳ ಕೇಂದ್ರ ಬಿಂದುವಾಗುತ್ತಿದ್ದ ಹಿರಿಯ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ನಿವೃತ್ತಿಯು ಹಲವು ಶಂಕೆಗಳನ್ನು ಹುಟ್ಟು ಹಾಕಿದೆ. ಶಿವಮೊಗ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಎಸ್ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ತಮಗೆ ತಪ್ಪಿದರೆ, ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಬೇಕೆಂದು ಈಶ್ವರಪ್ಪ ಒತ್ತಾಯಿಸಿದ್ದರು. ಆದರೆ, ಪಕ್ಷವು ಹೊಸ ಮುಖಗಳಿಗೆ ಟಿಕೆಟ್ ನೀಡಲು ಮುಂದಾಗಿರುವುದರಿಂದ ನಾಯಕರ ಚುನಾವಣಾ ರಾಜಕಾರಣದಿಂದ ನಿವೃತ್ತಿ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಿಂದ ಹಲವು ನಾಯಕರ ನಿವೃತ್ತಿ
ಈಶ್ವರಪ್ಪನವರಲ್ಲದೇ ಬಿಜೆಪಿಯಿಂದ ಹಲವು ನಾಯಕರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌ಎ ರವೀಂದ್ರನಾಥ್ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನೂ ಹಲವರು ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications