JDS Candidates List : ರಾಹುಕಾಲದ ನಂತರ ಇಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಸಾಧ್ಯತೆ
ಬೆಂಗಳೂರು ಏಪ್ರಿಲ್ 14: ರಾಜ್ಯ ವಿಧಾನಸಭಾ ಚುನಾವಣಾ ತಯಾರಿ ದಿನ ಕಳೆದಂತೆ ರಂಗೇರುತ್ತಿದೆ. ರಾಜ್ಯದ ಪ್ರಬಲ ಪಕ್ಷಗಳು ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಅಭ್ಯರ್ಥಿಗಳ ಪಟ್ಟಿಗಳನ್ನು ಘೋಷಣೆ ಮಾಡುತ್ತಿವೆ. ಇಂದು ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದು ರಾಹುಕಾಲದ ನಂತರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದಾದ ಬಳಿಕ ಈವರೆಗೂ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ಇಂದು ಜೆಡಿಎಸ್ ತನ್ನ ಎರಡನೇ ಪಟ್ಟಿಯನ್ನು ಪ್ರಕರಣ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ನಾಳೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಎರಡು ದಿನದೊಳಗೆ ಗೊಂದಲ ಬಗೆಹರಿಯಲಿದೆ. ಹಾಸನ ಜೆಡಿಎಸ್ ಟಿಕೆಟ್ ಕೂಡ ಫೈನಲ್ ಆಗಲಿದೆ ಎಂದು ಕುಮಾರಸ್ವಾಮಿ ಕಳೆದ ದಿನ ಹೇಳಿದ್ದಾರೆ.
ಹೀಗಾಗಿ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕರು ಹಾಗೂ ಮುಖಂಡರ ದಂಡೇ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಲಿದೆ. ಉತ್ತರ ಕರ್ನಾಟಕದ ಭಾಗದಿಂದಲೇ ಹೆಚ್ಚಿನ ಸಂಝ್ಯೆಯಲ್ಲಿ ಬಿಜೆಪಿ- ಕಾಂಗ್ರೆಸ್ ತೊರೆದು ಶಾಸಕರು ಜೆಡಿಎಸ್ ಸೇರುತ್ತಿರುವುದು ಕಂಡು ಬರುತ್ತಿದೆ. ಸೇರ್ಪಡೆ ಭರಾಟೆ ನೋಡದರೆ ಉತ್ತರ ಕರ್ನಾಟಕದಿಂದಲೇ ನಲವತ್ತಕ್ಕೂ ಅಧಿಕ ಸ್ಥಾನಗಳು ಪಕ್ಷಕ್ಕೆ ಬರಲಿವೆ. ಹೀಗಾಗಿ ಸರಳವಾಗಿ 123 ಸ್ಥಾನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನಿಸುತ್ತಿದೆ. ನಿರೀಕ್ಷೆ ಮೀರಿ ಮಾಜಿ ಶಾಸಕರು, ಮುಖಂಡರು ಸೇರುತ್ತಿದ್ದು ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಹಲವರು ಪಕ್ಷಕ್ಕೆ ಸೇರುತ್ತಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸೇರ್ಪಡೆ ಸಮಾವೇಶ ನಡೆಯಲಿದೆ. ಇಂದು ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ಜೆಡಿಎಸ್ ಪಕ್ಷದ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ವೈ.ಎಸ್.ವಿ, ದತ್ತಾ ಸೇರ್ಪಡೆ ವಿಷಯ ಎಚ್.ಡಿ. ದೇವೇಗೌಡರಿಗೆ ಬಿಟ್ಟಿದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ಜನತಾ ಪರಿವಾರ ಬಿಟ್ಟು ಹೋದವರೆಲ್ಲ ಮರಳಿ ಜೆಡಿಎಸ್‌ಗೆ ಬರುತ್ತಿದ್ದಾರೆ ಎಂದರು.
ಕಳೆದ ಡೆಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು. ಗೊಂದಲ ಮತ್ತು ಭಿನ್ನಾಭಿಪ್ರಾಯ ಹಾಗೂ ಅಸಮಾಧಾನ ಇರುವ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೇ ಜಾಣ್ಮೆಯ ನಡೆಯನ್ನು ಜೆಡಿಎಸ್ ಕಾಯ್ದಿರಿಸಿದೆ.
ಹಾಲಿ ಶಾಸಕ ಜಿಟಿ ದೇವೇಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಿರುವ ದಳಪತಿಗಳು, ಜಿಟಿಡಿ ಪುತ್ರ ಹರೀಶ್ ಗೌಡ ಅವರಿಗೂ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಎಲ್ಲಾ ಹಾಲಿ ಜೆಡಿಎಸ್ ಶಾಸಕರಿಗೂ ಟಿಕೆಟ್ ಘೋಷಿಸಲಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಅವರ ಬದಲಿಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದರೆ, ಚನ್ನಪಟ್ಟಣದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.












Click it and Unblock the Notifications