ಈಶ್ವರಪ್ಪನಿಂದ ಬಲವಂತವಾಗಿ ಪತ್ರ ಪಡೆದರಾ ಹೈಕಮಾಂಡ್ ನಾಯಕರು..? ಅಭಿಮಾನಿಗಳ ಎದುರು ಈಶ್ವರಪ್ಪ ಹೇಳಿದ್ದೇನು..?
ಶಿವಮೊಗ್ಗ,ಏಪ್ರಿಲ್12: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ವಿಚಾರವೇ ದೊಡ್ಡ ಕಗ್ಗಂಟಾಗಿದೆ. ಈಗಾಗಲೇ 189 ಅಭ್ಯರ್ಥಿಗಳನ್ನ ಘೋಷಿಸಿರುವ ಹೈಕಮಾಂಡ್ ಹಲವು ಲೆಕ್ಕಾಚಾರದಲ್ಲಿ ಬಿಜೆಪಿ ಟಿಕೆಟ್ ಘೋಷಿಸಿದೆ.
ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ. ಇತ್ತ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಈಶ್ವರಪ್ಪ ಅವರು ಅಭಿಮಾನಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

ಮಗನ ಪರ ಟಿಕೆಟ್ ಕೇಳಿರುವುದಾಗಿ ಕೆ ಎಸ್ ಈಶ್ವರಪ್ಪ ಪ್ರತಿಭಟನಾ ನಿರತ ಅಭಿಮಾನಿಗಳಿಗೆ ಮಂಗಳವಾರ ರಾತ್ರಿ ಭರವಸೆ ನೀಡಿದ್ದು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಟಿಕೆಟ್ ನಿರಾಕರಣೆಗಿಂತಾ, ದೂರ ಸರಿದಿದ್ದೇ ಒಳ್ಳೆಯದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಈಶ್ವರಪ್ಪ ಮಾತನಾಡಿ, ನಾನು 1989ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದೆ. ಅಂದು ಮೊದಲ ಬಾರಿಗೆ ಶಾಸಕನಾದೆ. ಆಗ ಬಿಜೆಪಿಯಿಂದ ನಾಲ್ಕು ಜನ ವಿಧಾನಸಭೆಗೆ ಆರಿಸಿ ಬಂದಿದ್ದರು. ಬಿಜೆಪಿ ನನ್ನನ್ನ ರಾಜ್ಯದ ಯುವ ಮೋರ್ಚಾ ಅಧ್ಯಕ್ಷನನ್ನಾಗಿ ಮಾಡಿತು. ಅದಾದ ನಂತರ ಎರಡು ಬಾರಿ ರಾಜ್ಯದ ಅಧ್ಯಕ್ಷನಾದ ವಿವಿಧ ಇಲಾಖೆಗಳ ಮಂತ್ರಿ ಕೂಡ ಆಗಿ ಕರ್ತವ್ಯ ನಿರ್ವಹಿಸಿದ್ದೇನೆ. ಒಟ್ಟು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ.
ನೀರಾವರಿ, ವಿದ್ಯುತ್, ಇಂಧನ ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಜ್ಯದ ಉಪಮುಖ್ಯಮಂತ್ರಿ ತನಕವೂ ಕೂಡ ನಾನು ಕೆಲಸ ಮಾಡಿದ್ದೇನೆ. ಈಗ ನನಗೆ 75 ವರ್ಷ. ಈ ಸಲ ನಾನು ಸ್ಪರ್ಧಿಸಿ ಗೆದ್ದರೆ ಇನ್ನೂ ಐದು ವರ್ಷ ಅಂದರೆ 80 ವರ್ಷದವರೆಗೆ ಶಾಸಕನಾಗಿ ಉಳಿದುಬಿಡುತ್ತೇನೆ. ಹಾಗಾಗಿ ನಾನು ನನ್ನ ನಿರ್ಧಾರಕ್ಕೆ ಬಂದೆ. ಈ ಚುನಾವಣೆಯಲ್ಲಿ ನಿಲ್ಲುವುದು ಬೇಡ ಎನಿಸಿತು.

ಈ ದೇಶದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಿದ, ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಶಿ ಕೂಡ ವಯಸ್ಸಾದ ಸಂದರ್ಭದಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ನಾನು ತತ್ ಕ್ಷಣ ತೆಗೆದುಕೊಂಡ ತೀರ್ಮಾನ ಅಲ್ಲ. ಸುಮಾರು ಆರು ತಿಂಗಳ ಹಿಂದೆಯೇ ನಿರ್ಧಾರ ಮಾಡಿದದ್ದೆ. ನನಗೆ ಚುನಾವಣೆ ಸ್ಪರ್ಧೆ ಮಾಡುವುದಕ್ಕೆ ಆಸಕ್ತಿ ಇಲ್ಲ. ದಯವಿಟ್ಟು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ ಎಂದರು.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೂ ವಿವರಿಸಿದ್ದೆ. ಕಳೆದ ವಾರ ಸಭೆಯಲ್ಲಿ ಕೂಡ ನಾನು ಹೇಳಿದ್ದೆ. ಆದರೆ ಯಡಿಯೂರಪ್ಪನವರು ಕೂಡ ಚುನಾವಣೆಗೆ ನಿಲ್ಲುತ್ತಿಲ್ಲ ನೀವು ಇರಬೇಕು ಎಂದು ರಾಜ್ಯದ ನಾಯಕರು ಹೇಳಿದ್ದರು. ಇದಾದ ನಂತರ ಕೇಂದ್ರ ಚುನಾವಣಾ ಸಮಿತಿ ಮುಂದೆ ಕೂಡ ಹೆಸರು ಬಂದಿತ್ತು. ಅಲ್ಲೂ ಕೂಡ ನಾನು ಸ್ಪರ್ಧೆ ಮಾಡೋದಿಲ್ಲ ಅಂತಾನೆ ಹೇಳಿದ್ದೆ. ಆದರೆ ಇಡೀ ಚುನಾವಣಾ ಸಮಿತಿ ನೀವು ಸ್ಪರ್ಧೆ ಮಾಡಲೇಬೇಕು ಎಂದಿತ್ತು. ನಾನು ಅಲ್ಲಿ ವಿರೋಧ ಮಾಡಕ್ಕೆ ಆಗಲಿಲ್ಲ. ಇದಾದ ಬಳಿಕ ನಾನು ಪತ್ರ ಬರೆಯಲೇ ಬೇಕಾಯಿತು. ಪತ್ರದಲ್ಲಿ ನಾನು ಸ್ವಯಂಪ್ರೇರಿತನಾಗಿ ಸ್ಪರ್ಧೆ ಮಾಡುವುದಿಲ್ಲ. ಆದರೆ ಸಮಾಜಸೇವೆ ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ವಹಿಸುತ್ತೇನೆ ಎಂದರು.
ನನ್ನ ಹೆಸರನ್ನು ಪರಿಗಣಿಸಬೇಡಿ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದೇನೆ. ನಾನು ಕೇವಲ ಚುನಾಯಿತ ಪ್ರತಿನಿಧಿಯಾಗಿ ಇರುವುದಿಲ್ಲ ಎಂಬುದು ಪತ್ರದ ಸಾರಾಂಶವಾಗಿದೆ. ನಾನು ನನ್ನ ಪತ್ರವನ್ನ ಕೇವಲ ಕೇಂದ್ರ ಸಮಿತಿಗೆ ಕಳಿಸಿದ್ದೆ. ಆದರೆ ಅವರು ಪತ್ರ ಬಿಡುಗಡೆ ಮಾಡಿದ್ದರು. ಏನೋ ಗೊತ್ತಿಲ್ಲ ಟಿವಿ ಮಾಧ್ಯಮಗಳಲ್ಲಿ ಬಂದು ಬಿಡ್ತು. ಅದು ಬಹಳ ದೊಡ್ಡ ಸುದ್ದಿ ಆಯಿತು. ಅವರೇ ತೆಗೆದು ಹಾಕಿದ್ದರೆ ಒಳ್ಳೆಯದಾ ಅಥವಾ ನಾನೇ ಸ್ವಯಂ ಪ್ರೇರಿತನಾಗಿ ನಿವೃತ್ತಿ ಹೊಂದುವುದು ಒಳ್ಳೆಯದಾ.? ಪಕ್ಷದ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಚುನಾವಣೆಯಲ್ಲಿ ನಿಲ್ತಿನೋ, ಬಿಡ್ತೀನೋ ಪಕ್ಷೇತರ ನೋ ಅದೆಲ್ಲಾ ಬೇರೆ, ಆದರೆ ಪಕ್ಷಕ್ಕೆ ದ್ರೋಹ ಮಾಡಿದರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ, ಹಾಗಾಗಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದರು.












Click it and Unblock the Notifications