LPG Cylinder Politics: ಚುನಾವಣಾ ಕದನದಲ್ಲಿ ಜೋರಾದ 'ಸಿಲಿಂಡರ್ ಪಾಲಿಟಿಕ್ಸ್', ಉಚಿತ ಘೋಷಣೆಗೆ ಮರುಳಾಗುವರೇ ಜನ?
ಬೆಂಗಳೂರು, ಮೇ 01: ಕರ್ನಾಟಕದಲ್ಲಿ ಚುನಾವಣೆ ಪ್ರಯುಕ್ತ ಒಂದೆಡೆ ಪ್ರಚಾರ, ಮತಭೇಟೆ ಕಾವು ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಿಲಿಂಡರ್ ಪಾಲಿಟಿಕ್ಸ್ ಮುನ್ನೆಲೆ ಬರುತ್ತಿದೆ. ಇದುವರೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಮುಖ ಪಕ್ಷಗಳ ಪೈಕಿ ಕೆಲವು ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತ ಸಿಲಿಂಡರ್ ನೀಡುವುದಾಗಿಯೇ ಘೋಷಿಸಿವೆ.
ಸೋಮವಾರ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಾರ್ಷಿಕವಾಗಿ ಮೂರು ಸಿಲಿಂಡರ್ ಕೊಡುವ ಬಗ್ಗೆ ಘೋಷಣೆ ಮಾಡಿದೆ. ಇದಕ್ಕು ಮೊದಲು ಜೆಡಿಎಸ್ ಐದು ಸಿಲಿಂಡರ್ ನೀಡುವ ಬಗ್ಗೆ ಹೇಳಿತ್ತು. ಕಾಂಗ್ರೆಸ್ ಸಹ ನಾಳೆ ಮಂಗಳವಾರ ಬಿಡುಗಡೆ ಮಾಡಲಿರುವ ಪ್ರಣಾಳಿಕೆಯಲ್ಲಿ ಸಿಲಿಂಡರ್ ವಿತರಣೆ ಘೋಷಣೆ ಬಗ್ಗೆ ಭರವಸೆ ಇರಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಹುತೇಕ ಮನೆಗಳಲ್ಲಿ ಸಿಲಿಂಡರ್ ಉರಿಯುತ್ತಿದೆ. ಅವರೆಲ್ಲರು ಅಡುಗೆ ಅನಿಲಕ್ಕೆ (ಸಿಲಿಂಡರ್) ದುಪಟ್ಟು ಬೆಲೆ ತೆತ್ತು ಬುದುಕು ನಡೆಸುತ್ತಿದ್ದಾರೆ. ಅವರಿಗೆ ಈ ಸಿಲಿಂಡರ್ ಬೆಲೆ ಏರಿಕೆ ಆರ್ಥಿಕ ಸಂಕಷ್ಟವನ್ನು ತಂಡೊಡ್ಡಿದೆ. ಇದನ್ನೆ ರಾಜಕೀಯ ಸರಕು ಮಾಡಿಕೊಂಡ ಪಕ್ಷಗಳು ಇದೀಗ ಬಹುಮತ ಪಡೆಯಲು ಉಚಿತ ಸಿಲಿಂಡರ್ ಘೋಷಣೆ ಮಾಡುತ್ತಿವೆ.
ಉಚಿತ ವಿತರಣೆ ತಗಲುವ ಮೊತ್ತ, ಖರ್ಚು ಸರಿದೂಗಿಸುವುದು ಹೇಗೆ? ಎಂಬ ಬಗ್ಗೆ ಯಾವ ಪಕ್ಷವು ಲೆಕ್ಕಾಚಾರ ಹಾಕಿದಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಘೋಷಣೆ ಮಾಡಿ ಬಹುಮತ ಗಳಿಸಿದರೆ ಆಯಿತು ಎಂಬ ನಿಲುವಿಗೆ ಬಂದಂತಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ, ಚುನಾವಣೆಯ ಪ್ರಣಾಳಿಕೆಯಲ್ಲಿ 'ಸಿಲಿಂಡರ್' ಮಹತ್ವ ಸ್ಥಾನವನ್ನೇ ಪಡೆದುಕೊಂಡಿದೆ.
ಅನಿಲದ ಬೆಲೆ ನಿರಂತರ ಹೆಚ್ಚಳದಿಂದ ಜನರಿಗೆ ಸಂಕಷ್ಟ
ಕೊರೊನಾ ನಂತರದಲ್ಲಿ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಆಡಳಿತಾರೂಢ ಬಿಜೆಪಿ ಮನೆ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಹಲವು ಭಾರಿ ಹೆಚ್ಚಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು. ಅನಿಲ ಬೆಲೆಗಳ ಹೆಚ್ಚಳದಿಂದ ಜನರು ಅಸಮಾಧಾನಗೊಂಡರು. ಇದರ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಪ್ರಯತ್ನಿಸುತ್ತಲೇ ಇದ್ದವು. ಇತ್ತ ಬಿಜೆಪಿ ಜಾಗತಿಕವಾಗಿ ತೈಲ ಹರಿವು, ಪೂರೈಕೆಯಲ್ಲಿ ಇರುವ ಅಡತಡೆಗಳ ಬಗ್ಗೆ ವಿವರಿಸುವ ಮೂಲಕ ವಿಪಕ್ಷಗಳ ದಾಳಿಗೆ ಬ್ರೇಕ್ ಹಾಕಲು ಯತ್ನಿಸಿತು.

ಈ ವಿಚಾರವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿತು. ಕೆಲವು ಕೈ ನಾಯಕರು ಸಿಲಿಂಡರ್ ಹಿಡಿದೇ ಪ್ರತಿಭಟಿಸಿದರು. ಬಿಜೆಪಿ ಹೋಟೆಲ್ ಉದ್ಯಮ ಮತ್ತು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಾರಿ ಸಾರಿ ಹೇಳಿದರು.
ಸಿಲಿಂಡರ್‌ಗೆ 'ಕೈ' ಮುಗಿದಿದ್ದ ಡಿಕೆಶಿ
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತದಾರರಿಗೆ ಮನವಿ ಮಾಡಿಕೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಸಿಲಿಂಡರ್ ಗೆ 'ಕೈ' ಮುಗಿದು ಸಾರ್ವಜನಿಕರ ಗಮನ ಸೆಳೆದಿದ್ದರು. ಪ್ರತಿಭಟನೆ, ಟೀಕೆಯಿಂದ ಶುರುವಾದ 'ಸಿಲಿಂಡರ್ ಪಾಲಿಟಿಕ್ಸ್' ಉಚಿತ ಘೋಷಣೆವರೆಗೂ ಬಂದು ನಿಂತಿದೆ.
123 ಸೀಟು ಗಳಿಸುವ ಗುರಿ ಹೊಂದಿರುವ ಜೆಡಿಎಸ್ ಇದೆಲ್ಲವನ್ನು ಗಮನಿಸುತ್ತಲೇ ತನ್ನ ಪ್ರಣಾಳಿಕೆಯಲ್ಲಿ 05 ಸಿಲಿಂಡರ್ ಘೋಷಿಸಿತು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಶೇಕಡಾ 50ರಷ್ಟು ಗ್ಯಾಸ್ ಸಬ್ಸಡಿ ನೀಡಲಾಗುವುದು. ಐದು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಗ್ಯಾಸ್ ಆಧಾರಿತ ಆಟೋ ಚಾಲಕರಿಗೆ ಮಾಸಿಕ 2,000 ಸಹಾಯಧನ ಸಹ ಕೊಡುವುದಾಗಿ ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಯಾರ ಉಚಿತ ಘೋಷಣೆಗೆ ಜನ ಮನಸೋಲುತ್ತಾರೆ?
ಇನ್ನು ಅನಿಲ ಆಮದು ಬಗ್ಗೆ ಸಬೂಬು ಹೇಳಿದ್ದ ಆಡಳಿತಾರೂಢ ಬಿಜೆಪಿಯೇ ಸೋಮವಾರ ಬಿಪಿಎಲ್ ಫಲಾನುಭವಿಗಳಿಗೆ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಕ್ಕೆ ಒಂದರಂತೆ ಒಟ್ಟು ಮೂರು ಸಿಲಿಂಡರ್‌ಗಳನ್ನು ಪ್ರತಿ ಕುಟುಂಬಕ್ಕೆ ನೀಡುವ ಭರವಸೆ ನೀಡಿದೆ. ಹೀಗೆ ಮೂರು ಸಿಲಿಂಡರ್ ಉಚಿತ ಘೋಷಣೆ ಮೂಲಕ ಬೆಲೆ ಏರಿಕೆಯಿಂದ ಅಸಮಾಧಾನಗೊಂಡಿದ್ದ ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿದೆ.
ವರ್ಷಗಳಿಂದಲೂ ಅನಿಲ ಸೇರಿದಂತೆ ಇತರೆ ವಸ್ತುಗಳ ಬೆಲೆಯಲ್ಲಿನ ಭಾರಿ ಹೆಚ್ಚಳದಿಂದ ಜನ ಬೇಸತ್ತಿದ್ದಾರೆ. ಈಗ ಚುನಾವಣೆ ಹೊತ್ತಲ್ಲಿ ಪಕ್ಷಗಳು ಉಚಿತ ಸೌಲಭ್ಯಗಳ ಭರವಸೆ ನೀಡಿವೆ. ಅದಕ್ಕೆ ಸಂಕಷ್ಟ ಉಂಡ ಜನರು ಮನಸೋಲುವರೆ? ಎಂಬ ಪ್ರಶ್ನೆ ಕಾಡುತ್ತಿದೆ. ಇದೆಲ್ಲದ್ದಕ್ಕೂ ಮೇ 13ರಂದು ಉತ್ತರ ಸಿಗಲಿದೆ.












Click it and Unblock the Notifications