ಮೊದಲ ಬಾರಿ ಮತ ಹಾಕುತ್ತಿರುವವರನ್ನು ಸೆಳೆಯಲು ಕಾಂಗ್ರೆಸ್‌ನಿಂದ 'ಯುವ ಮತ' ಅಭಿಯಾನ: ಇದು ಬಿಜೆಪಿಗೆ ಕೌಂಟರ್ ಕೊಡುವ ತಂತ್ರವೇ?
ಬೆಂಗಳೂರು, ಮಾರ್ಚ್ 31: ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಮುನ್ನ ಕಾಂಗ್ರೆಸ್ ( Congress ) ಪಕ್ಷವು ಮೊದಲ ಬಾರಿ ಮತ ಚಲಾಯಿಸುತ್ತಿರುವ ಯುವ ಮತದಾರರನ್ನು ಸೆಳೆಯಲು ಅಭಿಯಾನವನ್ನು ಆರಂಭಿಸಿದೆ. 'ನಿಮ್ಮ ಮತವನ್ನು ಸಂಭ್ರಮಿಸಿ' ಎಂಬುದು ಕರ್ನಾಟಕ ಕಾಂಗ್ರೆಸ್ ಘಟಕದ ಪ್ರಚಾರದ ಥೀಮ್ ಆಗಿದೆ.
ಕಾಂಗ್ರೆಸ್ ಯುವ ನಾಯಕ ಅಭಿಷೇಕ್ ದತ್ತಾ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರು 'ಯುವ ಮತ' ಅಭಿಯಾನದ ಒಟ್ಟಾರೆ ಉಸ್ತುವಾರಿ ವಹಿಸಲಿದ್ದಾರೆ ಎಂದು ಪಕ್ಷವು ಹೇಳಿದೆ.

ಈ ಅಭಿಯಾನವು 18 ರಿಂದ 23 ವಯೋಮಾನದವರ ಮೇಲೆ ಕೇಂದ್ರೀಕೃತವಾಗಿದೆ, ವಿಶೇಷವಾಗಿ ಮೊದಲ ಬಾರಿಗೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ. ಯುವ ಮತದಾರರನ್ನು ಹೆಚ್ಚು ಸೆಳೆಯುತ್ತಿರುವ ಬಿಜೆಪಿಗೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಶಿಷ್ಟ ಅಭಿಯಾನಕ್ಕೆ ಮೀಸಲಾದ ವೆಬ್‌ಸೈಟ್ ಅನ್ನು ಉದ್ಘಾಟಿಸಿದ ಅಭಿಷೇಕ್ ದತ್ತಾ, 'ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲಿದ್ದಾರೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹತ್ವವನ್ನು ಯುವಕರಿಗೆ ತಿಳಿಸಿ ಕೊಡಲಿದ್ದಾರೆ' ಎಂದು ಹೇಳಿದರು.
ಯುವ ಮತದಾರರಿಗೆ 'ನಿಮ್ಮ ಮತ ನಿಮ್ಮ ಹಕ್ಕು' ಎಂದು ನಾವು ಹೇಳಲಿದ್ದೇವೆ. ಮತದಾನದ ಮಹತ್ವದ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸಲು ಸ್ಕಿಟ್‌ಗಳು, ಸಂವಾದ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತೇವೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.

ನಿರುದ್ಯೋಗಿ ಯುವಕ/ ಯುವತಿಯರಿಗೆ ಎರಡು ವರ್ಷಕ್ಕೆ ₹ 3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ ₹ 1,500 ನೀಡುವುದಾಗಿ ತಮ್ಮ ಪಕ್ಷ ಘೋಷಿಸಿದೆ ಎಂದು ಅಭಿಷೇಕ್ ದತ್ತಾ ಇದೇ ವೇಳೆ ಹೇಳಿದರು.
'ಬಿಜೆಪಿ ಸರ್ಕಾರದ ಕೆಟ್ಟ ನೀತಿಯಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗಿ ಯುವಕರು ಅವರ ಪೋಷಕರಿಗೆ ಹೊರೆಯಾಗುತ್ತಿದ್ದಾರೆ. ತಿಂಗಳಿಗೆ ₹ 3,000 ನೀಡುವ ನಮ್ಮ ಯೋಜನೆಯು ಕುಟುಂಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಲಿದೆ' ಎಂದು ದತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ' ಕಾಂಗ್ರೆಸ್ ಸರ್ಕಾರವು ಖಾಲಿ ಇರುವ 2.50 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಖಾಸಗಿ ವಲಯದಲ್ಲಿ ವರ್ಷಕ್ಕೆ 10 ರಿಂದ 15 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ' ಎಂದು ಭರವಸೆ ನೀಡಿದರು.
ರಕ್ಷಾ ರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, 'ಪ್ರತಿಯೊಬ್ಬ ಯುವಕರಿಗೆ ಪಕ್ಷದ ಸಂದೇಶವನ್ನು ತಲುಪಿಸುವತ್ತ ನನ್ನ ಗಮನವಿದೆ' ಎಂದರು.
'ಆದರೆ ಪಕ್ಷವು ನನ್ನನ್ನು ಸ್ಪರ್ಧಿಸುವಂತೆ ಕೇಳಿದರೆ, ನಾನು ಸ್ಪರ್ಧಿಸುತ್ತೇನೆ. ನಾನು ಪಕ್ಷದ ನಿಷ್ಠಾವಂತ ಮತ್ತು ಶಿಸ್ತಿನ ಸಿಪಾಯಿ' ಎಂದು ಅವರು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ತಿಳಿಸಿದ್ದಾರೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದು ಸಿಇಸಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಅಂಕಿ- ಅಂಶಗಳನ್ನು ವಿವರಿಸಿದ ಸಿಇಸಿ, ರಾಜ್ಯದಲ್ಲಿ ಒಟ್ಟು 5. 21 ಕೋಟಿ ಇದ್ದು, 100 ಪ್ಲಸ್ ಮತದಾರರ ಸಂಖ್ಯೆ 16, 976 ಆಗಿದೆ. ರಾಜ್ಯಾದ್ಯಂತ 58, 000 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications