Karnataka Elections 2023: ಸಿಟಿ ರವಿ ಕಾರಿನಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ 'ಓಟಿ ಮದ್ಯ'
ಬೆಂಗಳೂರು, ಮಾರ್ಚ್ 27: ಚಿಕ್ಕಮಗಳೂರಿನಲ್ಲಿ ಬಿಜೆಪಿ ( BJP ) ಶಾಸಕ ಸಿಟಿ ರವಿಗೆ ( CT Ravi ) ಸಂಬಂಧಿಸಿದ ಕಾರಿನಲ್ಲಿ ಮದ್ಯ, ಲಾಂಗ್ ಹಾಗೂ ಕ್ಯಾಲೆಂಡರ್ ಪತ್ತೆಯಾಗಿದೆ. ಈ ಕ್ಯಾಲೆಂಡರ್‌ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಫೋಟೊ ಇದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ. ಈ ಮೂಲಕ ಸಿಟಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಶಾಸಕರಿಗೆ 'ಬಾಂಬೆ ಮಿಠಾಯಿ' ಆಮಿಷ ತೋರಿಸಿ ಆಪರೇಷನ್ ಮಾಡುವ ಬಿಜೆಪಿ ಮತದಾರರಿಗೆ ಹೆಂಡ ತೋರಿಸಿ ಮತ ಪಡೆಯಲು ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಸಿ ಟಿ ರವಿಗೆ ಸಂಬಂಧಿಸಿದ ಕಾರಿನಲ್ಲಿ ' ಓಟಿ ಮದ್ಯ ' ಹಾಗೂ ಲಾಂಗ್ ಪತ್ತೆಯಾಗಿದೆ. ಹೆಂಡ ಕುಡಿಸಿ, ಬೆದರಿಸಿ ಮತ ಪಡೆಯುವ ಜವಾಬ್ದಾರಿಯನ್ನು ರೌಡಿ ಮೋರ್ಚಾಗೆ ವಹಿಸಲಾಗಿದೆಯೇ ಬಿಜೆಪಿ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಸಿಟಿ ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ ಸಿ ಟಿ ರವಿಗೂ, ಕಾರು ಆಘಾತಕ್ಕೂ, ಓಟಿ ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ. ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ' ಎಂದು ಕೆಪಿಸಿಸಿ ಟೀಕಿಸಿದೆ.
ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್‌ನಲ್ಲಿ ಕಾರ್‌ವೊಂದು ಸೋಮವಾರ ತಡರಾತ್ರಿ ಅಪಘಾತಕ್ಕೆ ಒಳಗಾಗಿದೆ. ಈ ಕಾರು ಬಿಜೆಪಿ ಶಾಸಕ ಸಿ ಟಿ ರವಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಈ ಕಾರಿನಲ್ಲಿ ಮಾರಕಾಸ್ತ್ರ, ಮದ್ಯದ ಪಾಕೆಟ್‌ಗಳು ಹಾಗೂ ಕ್ಯಾಲೆಂಡರ್ ಸಿಕ್ಕಿದೆ. ಈ ಕ್ಯಾಲೆಂಡರ್‌ನಲ್ಲಿ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರ ಭಾವಚಿತ್ರವಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಚಿಕ್ಕಮಗಳೂರಿನ ಎಐಟಿ ಸರ್ಕಲ್‌ನಲ್ಲಿ ಜಮಾಯಿಸಿದ ಸ್ಥಳೀಯರು ಕಾರಿನಲ್ಲಿದ್ದ ಮದ್ಯ, ಕ್ಯಾಲೆಂಡರ್ ಹಾಗೂ ಮಾರಕಾಸ್ತ್ರವನ್ನು ಹೊರತೆಗೆದಿದ್ದಾರೆ. ಈ ಸಮಯದಲ್ಲಿ ಕಾರಿನ ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಸ್ಥಳೀಯರು ಇತನನ್ನು ಹಿಡಿದ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಿಕ್ಕಮಗಳೂರು ನಗರ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಅಪಘಾತದ ಬಳಿಕ ಕಾರನ್ನು ಪರಿಶೀಲಿಸಿದ ಸ್ಥಳೀಯರು ಲಕ್ಷಾಂತರ ಮೌಲ್ಯದ ಓಟಿ ಮದ್ಯದ ಪಾಕೆಟ್‌ಗಳು ಹಾಗೂ ಸಿ ಟಿ ರವಿ ಭಾವಚಿತ್ರ ಇರುವ ಕ್ಯಾಲೆಂಡರ್ ಕಂಡು ದಂಗಾಗಿ ಹೋಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಸಿಟಿ ರವಿ - ಓಟಿ ರವಿ ಎಂದು ಘೋಷಣೆ ಮೊಳಗಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುಣಾವಣೆ ಸಂದರ್ಭದಲ್ಲಿ ಸಿಕ್ಕಿರುವ ಲಕ್ಷಾಂತರ ಮೌಲ್ಯದ ಮದ್ಯ, ಮಾರಕ ಅಸ್ತ್ರಗಳು ಸಿಟಿ ರವಿ ಬಗ್ಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ.

# BJP vs BJP: ಇದು ಬಂಡಾಯಪರ್ವ ಎಂದ ಕಾಂಗ್ರೆಸ್
ಬಿಜೆಪಿಯ ಸಾಲು ಸಾಲು ಶಾಸಕರು, ಸಚಿವರ ವಿರುದ್ಧ ಅವರ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಇದು ಆಕ್ರೋಶವು ಸರ್ಕಾರದ ವೈಫಲ್ಯಕ್ಕಾಗಿಯೋ, ಶಾಸಕರ ವೈಫಲ್ಯಕ್ಕಾಗಿಯೋ ಬಿಜೆಪಿ? ಸ್ವಂತ ಕಾರ್ಯಕರ್ತರನ್ನೇ ಮೆಚ್ಚಿಸಲಾಗದ ಬಿಜೆಪಿ ಜನಸಾಮಾನ್ಯರನ್ನು ಮೆಚ್ಚಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications