ಹೈಕಮಾಂಡ್ ನಿಂದ ಬಂತು ಖಡಕ್ ಸೂಚನೆ ; ರಾಜಾಹುಲಿ ನಿವಾಸದಲ್ಲಿ ಕಮಲ ಕಲಿಗಳ ಮೀಟಿಂಗ್! ಬಿಜೆಪಿ ಲೆಕ್ಕಾಚಾರವೇನು?
ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಮತದಾನದ ಬಳಿಕ ಪ್ರಕಟವಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಸೂಚಿಸಿದ್ರೆ, ಇತ್ತ ಕೆಲ ಸಮೀಕ್ಷೆಗಳು ಕಾಂಗ್ರೆಸ್ ಗೆ ಬಹುಮತ ಬರಲಿದೆ ಎಂದು ಹೇಳಿದ್ದು, ಗೆಲ್ಲುವ ಉತ್ಸಹದಲ್ಲಿದ್ದ ಕಮಲಕಲಿಗಳಿಗೆ ನಿದ್ದೆಗೆಡಿಸುವಂತೆ ಮಾಡಿದೆ.
ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಂದ ನಂತರ ಹೈಕಮಾಂಡ್ ನಾಯಕರ ಜೊತೆಗೆ ದೂರವಾಣಿ ಕರೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತುಕತೆ ನಡೆಸಿದ್ದು, ಹೈಕಮಾಂಡ್ ನಾಯಕರು ಕೊಟ್ಟ ಸೂಚನೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್ ಸಭೆ ನಡೆಸಿದ್ದಾರೆ.

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ, ಇದೀಗ ಕರ್ನಾಟಕದಲ್ಲೂ ಅಧಿಕಾರ ಕಳೆದುಕೊಂಡರೇ ಕಷ್ಟ ಆಗಲಿದೆ ಎಂದು ಹೈಕಮಾಂಡ್ ನಾಯಕರ ಚರ್ಚೆ ನಡೆಸಿದ್ದಾರೆ. 2018 ರ ಚುನಾವಣಾ ಫಲಿತಾಂಶ ಹಾಗೂ ನಂತರ ರಚನೆಯಾದ ಮೈತ್ರಿ ಸರ್ಕಾರ ಪತನದ ನಂತರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು.
ಆಗ ಸರ್ಕಾರ ರಚನಗೆ ಆಪರೇಷನ್ ಕಮಲ ಕಾರ್ಯಾಚರಣೆಯ ಮೊರೆ ಹೋಗಬೇಕಾಯಿತು. ಆದರೆ, ಈ ಬಾರಿ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹೈಕಮಾಂಡ್ ನಾಯಕರ ಸೂಚನೆಯ ಮೇರೆಯ ರಾಜ್ಯ ಬಿಜೆಪಿ ನಾಯಕರು ಸಭೆ ಸೇರಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಈ ಬಾರಿಯೂ ಅಧಿಕಾರದ ಗದ್ದುಗೆ ಏರಲು ಕನಸು ಕಂಡಿದ್ದು, ಹಲವು ಸಮೀಕ್ಷೆಯಿಂದಾಗಿ ಮತ್ತೆ ಅತಂತ್ರ ವಿಧಾನಸಭಾ ಫಲಿತಾಂಶ ಬರಲಿದೆ, ಈಗಾಗಲೇ ಕಾಂಗ್ರೆಸ್ ಏನೇ ತಯಾರಿ ನಡೆಸಿದರು, ಸರ್ಕಾರ ರಚನೆಗೆ ನಮ್ಮ ಬಳಿ ಪ್ಲಾನಜ್ ಬಿ ರೆಡಿ ಇದೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ಸೂಚನೆ ನೀಡಿದ್ದಾರೆ.
ಈಗಾಗಲೇ ಹೈಕಮಾಂಡ್ ನಾಯಕರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಒಂದು ವೇಳೆ ಚುನಾವಣಾ ಫಲಿತಾಂಶ ಅತಂತ್ರವಾದರೇ ಎಲ್ಲಾ ತಂತ್ರಗಳಿಗೂ ಸಿದ್ದರಾಗಿರಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಇನ್ನೂ ಅತಂತ್ರ ಫಲಿತಾಂಶ ಬಂದರೇ ಶಕಾಯಗತಾಯ ಅಧಿಕಾರ ಹಿಡಿಯಲೇಬೇಕು ಅದಕ್ಕಾಗಿ ಮಾಡಬೇಕಾಗಿರುವ ತಂತ್ರಗಾರಿಕೆ ಕುರಿತು ಸಮಾಲೋಚನೆಯನ್ನ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ನಡೆಸಿದ್ದಾರೆ. ಅಲ್ಲದೆ ಒಂದಷ್ಟು ಕಡಿಮೆ ಸ್ಥಾನ ಬಂದರೂ ಸರ್ಕಾರ ರಜಾ ಮಾಡಬೇಕು. ಅದಕ್ಕಾಗಿ ಏನೆಲ್ಲ ಮಾಡಬೇಕು ಎನ್ನುವ ಕುರಿತು ಮಾತುಕತೆ ನಡೆಸಿದ್ದಾರೆ.
ಸದ್ಯದ ಸಮೀಕ್ಷಾ ವರದಿಗಳು ಹಾಗು ಪಕ್ಷದ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದ್ದು ಆ ಬಗ್ಗೆಯೂ ಯಡಿಯೂರಪ್ಪ ಜೊತೆ ಸಿಎಂ ಚರ್ಚಿಸಿದರು. ಚುನಾವಣೆ ನಂತರ ಯಡಿಯೂರಪ್ಪ ನಿವಾಸದಲ್ಲಿ ನಡೆದ ಮೊದಲ ಸಭೆ ಇದಾಗಿದ್ದು, ರಾಜಕೀಯವಾಗಿ ಬಿಜೆಪಿ ಮುಂದಿಡಬೇಕಾದ ಹೆಜ್ಜೆಗಳ ಕುರಿತು ಚರ್ಚಿಸಿದರು. ಬಹುಶಃ ಆಪರೇಷನ್ ಕಮಲದ ವಿಚಾರವೂ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ಸಮೀಕ್ಷೆಯಲ್ಲಿನ ಅಂಕಿ ಅಂಶಗಳನ್ನ ಗಮನಿಸಿದರೇ ಬಿಜೆಪಿಗೆ ಪೂರ್ಣ ಬಹುಮತ ಸಿಗುವುದು ಅನುಮಾನ ಎಂಬ ವಾತಾವರಣ ಇದೆ. ಹೈಕಮಾಂಡ್ ಈವರೆಗೆ ನಡೆಸಿರುವ ಸಮೀಕ್ಷೆಗಳಲ್ಲಿ ಯಾವುದರಲ್ಲೂ ಪಕ್ಷ ಬಹುಮತ ಗಳಿಸುವ ಸೂಚನೆಗಳು ಕಂಡು ಬಂದಿಲ್ಲ. ಈ ಮುನ್ಸೂಚನೆ ಅರಿತ ಪಕ್ಷದ ರಾಷ್ಟ್ರೀಯ ನಾಯಕರು ಶತಾಯಗತಾಯ ಅಧಿಕಾರ ಹಿಡಿಯಲು ಎಲ್ಲ ರಾಜಕೀಯ ತಂತ್ರಗಳ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇತ್ತ ಜೆಡಿಎಸ್ ನ ನಾಲ್ಕೈದು ನಾಯಕರನ್ನ ಸಂಪರ್ಕಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications