BY Vijayendra: ಕೊನೆಯ ಕ್ಷಣದಲ್ಲಿ ಬದಲಾದ ಬಿಜೆಪಿ ಪ್ಲಾನ್; ವಿಜಯೇಂದ್ರ ಹೆಗಲಿಗೆ ಈ 20 ಕ್ಷೇತ್ರಗಳ ಜವಾಬ್ದಾರಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿವೆ. ಮೇ 10 ರಂದು ನಡೆಯುವ ಮತದಾನದಲ್ಲಿ ಅಂತಿಮವಾಗಿ ರಾಜ್ಯದ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಮೇ 13ರವರೆಗೂ ಕಾಯಲೇಬೇಕು.
ಕರುನಾಡು ಕುರುಕ್ಷೇತ್ರವನ್ನು ಗೆಲ್ಲಲು ರಾಜ್ಯದ ಎಲ್ಲ 224 ಕ್ಷೇತ್ರಗಳು ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿವೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್ ನಾಯಕರು ಅಲ್ಲಲ್ಲಿ ಬೀಡು ಬಿಟ್ಟಿದ್ದು, ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಪ್ರಚಾರದಲ್ಲಿ ವಿಪಕ್ಷ ಕಾಂಗ್ರೆಸ್‌ಗಿಂತ ಆಡಳಿತರೂಢ ಬಿಜೆಪಿಯೇ ಮುನ್ನಡೆ ಕಾಯ್ದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ಪಕ್ಷದ ಅಭ್ಯರ್ಥಿಗಳ ಪರ ಸಮಾವೇಶ, ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ವಿವಿಧ ಸಮುದಾಯಗಳ ಮತದಾರರನ್ನು ಒಲೈಸುವ ತಂತ್ರಗಳು ಸಹ ನಡೆಯುತ್ತಿವೆ.
ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ದೊಡ್ಡ ಹಾಗೂ ಪ್ರಬಲ ಲಿಂಗಾಯತ ಸಮುದಾಯದ ಮತಗಳ ಕ್ರೂಢೀಕರಣಕ್ಕೆ ಬಿಜೆಪಿ ಬೇಕಾದ ಕಸರತ್ತು ಪ್ರಯೋಗಿಸುತ್ತಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿ ಹೈಕಮಾಂಡ್ ನಾಯಕರಿಗೆ ಲಿಂಗಾಯತ ಮತಗಳು ಕೈಬಿಟ್ಟು ಹೋಗದಂತೆ ಎಚ್ಚರ ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಪರಮೊಚ್ಚ ನಾಯಕ ಹಾಗೂ ಮಾಸ್ ಲೀಡರ್ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುತ್ತಿದೆ. ಇದೀಗ ಮತದಾನದ ದಿನ ಹತ್ತಿರವಾಗುತ್ತಿದ್ದರಿಂದ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಳಸಿ ಲಿಂಗಾಯತ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್, ಬಿ.ವೈ. ವಿಜಯೇಂದ್ರ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಎಲ್ಲೆಡೆ ಪ್ರಚಾರಕ್ಕೆ ಲಭ್ಯವಿಲ್ಲದ ಹಿನ್ನಲೆ ಕೊನೆಯ ಕ್ಷಣದಲ್ಲಿ ಬಿ.ವೈ. ವಿಜಯೇಂದ್ರ ಬಳಕೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಲಿಂಗಾಯತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ವಿಜಯೇಂದ್ರರಿಂದ ಪ್ರಚಾರ ಮಾಡಿಸಲು ಪ್ಲಾನ್ ಮಾಡಲಾಗಿದೆ. ಅದರಂತೆ ಈಗಾಗಲೇ ಸುಮಾರು 20 ಕ್ಷೇತ್ರದ ಪ್ರಚಾರಕ್ಕೆ ತೆರಳಲು ಬಿ.ವೈ. ವಿಜಯೇಂದ್ರಗೆ ಹೈಕಮಾಂಡ್ ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಲಿಂಗಾಯತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ವಿಜಯೇಂದ್ರರಿಗೆ ಹೈಕಮಾಂಡ್ ಸೂಚಿಸಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ, ಕೊನೆ ಕ್ಷಣದಲ್ಲಿ ವಿಜಯೇಂದ್ರ ಪ್ರಚಾರ ಮಾಡಿದರೆ ಲಿಂಗಾಯತ ಮತಗಳನ್ನು ಸೆಳೆಯುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ನದ್ದಾಗಿದೆ.
ಬಿ. ಶ್ರೀರಾಮುಲು, ಗೋವಿಂದ ಕಾರಜೋಳ, ತಿಪ್ಪಾರೆಡ್ಡಿ, ಪೂರ್ಣಿಮಾ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪರವೂ ಪ್ರಚಾರ ಮಾಡುವಂತೆ ಬಿ.ವೈ. ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿ.ವೈ. ವಿಜಯೇಂದ್ರಗೆ ವಿಶೇಷ ಸೌಲಭ್ಯ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಂತರ ಲಿಂಗಾಯತ ಮತಗಳನ್ನು ಸೆಳೆಯುವ ಮುಖ ಎಂದರೆ ಅದು ಬಿ.ವೈ. ವಿಜಯೇಂದ್ರ. ಹೀಗಾಗಿ ಕೊನೆ ಕ್ಷಣದಲ್ಲಿ ಪ್ರಚಾರದ ಅಖಾಡಕ್ಕಿಳಿಸಿದ್ದು, ಅವರು ಓಡಾಡಲು ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್ ಮೂಲಕ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಪ್ರಚಾರ ನಡೆಸುವಂತೆ ಸೂಚನೆ ನೀಡಲಾಗಿದೆ.
ಕಮಲ ಪಾಳಯಕ್ಕೆ ಬಿಎಸ್‌ವೈಯೇ ಆಸರೆ
ಸದ್ಯ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಕಮಲ ಪಾಳಯದ ಮಾಸ್ ಲೀಡರ್ ಮಾತ್ರವಲ್ಲದೆ, ಬಿಜೆಪಿಯ ಪವರ್ ಸೆಂಟರ್ ಆಗಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರೂ ಅವರ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಯಡಿಯೂರಪ್ಪ ಹೋದಲ್ಲೆಲ್ಲಾ ಜನಸಾಗರವೇ ಹರಿದುಬರುತ್ತಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಲಿಂಗಾಯತ ಸಮುದಾಯದ ಅತಿ ದೊಡ್ಡ ನಾಯಕ. ಹೀಗಾಗಿ ಆ ಸಮುದಾಯದ ಮತ ಬ್ಯಾಂಕ್ ಮತ್ತೊಮ್ಮೆ ಸೆಳೆಯಬೇಕೆಂದರೆ ಅದು ಯಡಿಯೂರಪ್ಪರಿಂದ ಮಾತ್ರ ಸಾಧ್ಯ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ಯಡಿಯೂರಪ್ಪ ಅಸ್ತ್ರದಿಂದ ಮತ್ತೊಮ್ಮೆ ಚುಕ್ಕಾಣಿ ಹಿಡಿಯುವುದಕ್ಕೆ ಬಿಜೆಪಿ ತಂತ್ರ ರೂಪಿಸಿದೆ. ಸ್ಟಾರ್ ಪ್ರಚಾರಕರ ಲಿಸ್ಟ್ನಲ್ಲಿರುವ ಯಡಿಯೂರಪ್ಪಗೆ ವಿಶೇಷ ಸೌಲಭ್ಯಗಳನ್ನೇ ಕೊಟ್ಟಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications