ಚುನಾವಣಾ ಎಫೆಕ್ಟ್: ಮೆಜೆಸ್ಟಿಕ್‌ನಲ್ಲಿ ಬಸ್‌ಗಳಿಲ್ಲದೆ ಜನರ ಪರದಾಟ
ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದ್ದು, ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಿರುವ ಜನರು ಮತದಾನ ಮಾಡಲು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಹೀಗಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮಂಗಳವಾರ ಊರುಗಳತ್ತ ತೆರಳುತ್ತಿದ್ದು, ಬೆಂಗಳೂರಿನಿಂದ ಇತರ ಜಿಲ್ಲೆಗಳತ್ತ ತೆರಳುವ ಬಸ್‌ಗಳಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಜನ ಪರದಾಡುತ್ತಿದ್ದು, ನಿಲ್ದಾಣಕ್ಕೆ ಬರುವ ಮುನ್ನವೇ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ತುಮಕೂರು, ಚಿತ್ರದುರ್ಗ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳತ್ತ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಮತದಾನ ಮಾಡಲು ಊರುಗಳಿಗೆ ತೆರಳಲು ಮುಂದಾಗಿರುವ ಜನ ಬಸ್ ಸಿಗದೇ ಪರದಾಡುತ್ತಿದ್ದು, ಬಸ್‌ಗಳಿಗಾಗಿ ಕಾದು ನಿಂತು ಸುಸ್ತಾಗಿದ್ದಾರೆ.
ಮತದಾನ ದೇಶದ ಪ್ರತಿಯೊಬ್ಬರ ಹಕ್ಕು. ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ತಮ್ಮ ನಾಯಕರನ್ನು ಆರಿಸುವ ಹಕ್ಕು ಅರ್ಹತೆ ಹೊಂದಿದ ಪ್ರತಿಯೊಬ್ಬ ಪ್ರಜೆಗಿದೆ. ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಯಲ್ಲೂ ಜನರು ತಮ್ಮ ಹಕ್ಕು ಚಲಾಯಿಸಬೇಕು. ತಮಗೆ ಬೇಕಾದ ಸರ್ಕಾರ ಅಥವಾ ನಾಯಕನನ್ನು ತಾವೇ ಆರಿಸಬೇಕು. ಹೀಗಾಗಿ ಕರ್ನಾಟಕದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೂಡ ರಾಜ್ಯಕ್ಕೆ ಸೂಕ್ತ ಸರ್ಕಾರ ಆರಿಸಲು ಮತದಾನ ಮಾಡಬೇಕಿದೆ.
ಬೆಂಗಳೂರಿನ ಕಾರ್ಮಿಕರಿಗೆ ವೇತನ ಸಮೇತ ರಜೆ
ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಯ ದಿನ ಬೆಂಗಳೂರಿನ ಕಾರ್ಮಿಕರಿಗೆ ವೇತನ ಸಮೇತ ರಜೆ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಬೆಂಗಳೂರಿನ ಚುನಾವಣಾ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದು, ಮತದಾನದ ದಿನ ಬೆಂಗಳೂರಿನ ಎಲ್ಲಾ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಗಾರ್ಮೆಂಟ್ಸ್ ನೌಕರರಿಗೆ ಸಂಬಳ ಸಹಿತ ರಜೆ ಘೋಷಿಸಲಾಗಿದೆ. ಆದರೆ ಈ ರಜೆಯನ್ನು ದುರುಪಯೋಗ ಪಡಿಸಿಕೊಂಡು ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ ಎನ್ನಲಾಗಿದೆ.












Click it and Unblock the Notifications