ಲಂಚ ಪ್ರಕರಣ; ಸಚಿವ ಎಸ್‌ಟಿ ಸೋಮಶೇಖರ್ ವಜಾಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು, ಅ.11: ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಬಿಜೆಪಿ ಸಚಿವ ಎಸ್‌ಟಿ ಸೋಮಶೇಖರ್ ಅವರನ್ನು ವಜಾಗೊಳಿಸುವಂತೆ ಮಂಗಳವಾರ ಕಾಂಗ್ರೆಸ್ ಒತ್ತಾಯಿಸಿದೆ.
12 ಕೋಟಿ ರೂಪಾಯಿ ಲಂಚ ಪ್ರಕರಣದಲ್ಲಿ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂ ಕೋರ್ಟ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಬಿಜೆಪಿ ಸಚಿವ ಎಸ್‌ಟಿ ಸೋಮಶೇಖರ್ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಸಹಕಾರ ಖಾತೆ ರಾಜ್ಯ ಸಚಿವರನ್ನು ಯಾವಾಗ ವಜಾಗೊಳಿಸುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಸೋಮಶೇಖರ್ 2018 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, ಪಕ್ಷಾಂತರಗೊಂಡು 2019 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಗೆದ್ದರು.

ವಜಾ ಯಾವಾಗ ಎಂದು ಸಿಎಂ ಬೊಮ್ಮಾಯಿಗೆ ಪ್ರಶ್ನೆ
"ಬಿಡಿಎ ಒಪ್ಪಂದದಲ್ಲಿ 12 ಕೋಟಿ ರೂಪಾಯಿ ಲಂಚದ ಆರೋಪವಿದೆ. ಲೋಕಾಯುಕ್ತ ಪೊಲೀಸರು ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಇತರರ ವಿರುದ್ಧ ಸೆಪ್ಟೆಂಬರ್ 18, 2022 ರಂದು ಎಫ್‌ಐಆರ್‌ಗೆ ಆದೇಶಿಸಿದ್ದಾರೆ. ಎಫ್‌ಐಆರ್‌ಗೆ ತಡೆ ನೀಡುವ ಮನವಿಯನ್ನು ಎಸ್‌ಸಿ ನಿರಾಕರಿಸಿದೆ. ಈಗ ಬಸವರಾಜ ಬೊಮ್ಮಾಯಿ ಅವರೇ, ನೀವು ಅವರನ್ನು ಯಾವಾಗ ವಜಾಗೊಳಿಸುತ್ತೀರಿ" ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ "40 ಪರ್ಸೆಂಡ್ ಸರ್ಕಾರ" ಎಂಬ ಹ್ಯಾಶ್‌ಟ್ಯಾಗ್ ಬಳಸಿ ರಂದೀಪ್ ಸುರ್ಜೆವಾಲಾ ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಎಫ್‌ಐಆರ್‌ಗೆ ತಡೆಯಾಜ್ಞೆ ನೀಡದ ಸುಪ್ರೀಂ ಕೋರ್ಟ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣ ದಾಖಲಿಸಿರುವ ಕುರಿತು ಸಚಿವ ಎಸ್ ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಜಿ. ಸಿ. ಪ್ರಕಾಶ್ ಮತ್ತು ಉದ್ಯಮಿ ಕೆ.ರವಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಹೋರಾಟಗಾರ ಟಿ ಜೆ ಅಬ್ರಹಾಂ ಅವರ ದೂರಿನ ಮೇರೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ತನಿಖೆಗೆ ನ್ಯಾಯಾಲಯ ಸೆಪ್ಟೆಂಬರ್ 23 ರಂದು ತಡೆ ನೀಡಿತ್ತು. ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಸತಿ ಸಮುಚ್ಚಯ ನಿರ್ಮಿಸಲು ನಿರ್ಮಾಣ ಸಂಸ್ಥೆಗೆ ಬಿಡಿಎ ಗುತ್ತಿಗೆ ನೀಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ.

ಭ್ರಷ್ಟಾಚಾರದ ಆರೋಪ ಬಿಎಸ್‌ವೈ ಅವರ ಸಿಎಂ ಸ್ಥಾನ ಕಸಿಯಿತೆ?
"ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿರುವ ಜನ ಸಮುದ್ರದಿಂದ ಭಯಭೀತರಾದ ಸಿಎಂ ಬೊಮ್ಮಾಯಿ-ಯಡಿಯೂರಪ್ಪ ಇಂದು ತಮ್ಮ "ವಿಮಾನ-ಹೆಲಿಕಾಪ್ಟರ್" ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕು" ಎಂದು ಸುರ್ಜೆವಾಲ ಹತ್ತು ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದಾರೆ.
1. ಭ್ರಷ್ಟಾಚಾರದ ಆರೋಪದಿಂದಾಗಿ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲಾಗಿದೆಯೇ? ಈಗ ಅವರ ವಿರುದ್ಧ ಲೋಕಾಯುಕ್ತರು ಭ್ರಷ್ಟಾಚಾರ ಎಫ್‌ಐಆರ್ ದಾಖಲಿಸಿದ್ದಾರೆಯೇ?
2. ಬಿಜೆಪಿ ಸರ್ಕಾರವನ್ನು ಈಗ ರಾಷ್ಟ್ರವ್ಯಾಪಿ 40 ಪರ್ಸೆಂಟ್ ಸರ್ಕಾರ ಎಂದು ಕರೆಯಲಾಗುತ್ತಿಲ್ಲವೇ?
3. ಪ್ರತಿಯೊಬ್ಬರ ಬಾಯಲ್ಲೂ ಪೇ ಸಿಎಂ ಎಂಬುದು ಗುಸುಗುಸು ಮಾತಲ್ಲವೇ? ಏಕೆ?
4. "ಗುತ್ತಿಗೆದಾರರ ಸಂಘದ" 40% ಕಮಿಷನ್ ದೂರಿನ ಮೇಲೆ ನೀವು ಏಕೆ ಕ್ರಮ ಕೈಗೊಂಡಿಲ್ಲ?
5. 13,000 ಪ್ರೈವೇಟ್ ಶಾಲೆಗಳ ಸಂಘದ 40% ಕಮಿಷನ್ ದೂರಿನ ಮೇಲೆ ನೀವು ಏಕೆ ಕ್ರಮ ಕೈಗೊಂಡಿಲ್ಲ?
ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

2,500 ಕೋಟಿಗೆ ಮುಖ್ಯಮಂತ್ರಿ ಹುದ್ದೆ ಮಾರಾಟ!?
6. ಮಠಗಳ ಸ್ವಾಮೀಜಿಯವರು ನಿಮ್ಮ ಸರ್ಕಾರದ ಮೇಲೆ 40% ಕಮಿಷನ್ ಏಕೆ ಆರೋಪಿಸಿದ್ದಾರೆ?
7. 40% ಪ್ರಕರಣದಲ್ಲಿ ಸಂತೋಷ್ ಪಾಟೀಲ್ ಹಂತಕರಿಗೆ ಏಕೆ ಕ್ಲೀನ್ ಚಿಟ್ ನೀಡಿದ್ದೀರಿ?
8. ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರವು ಅತ್ಯಂತ ಭ್ರಷ್ಟವಾಗಿದೆ ಎಂದು ನಿಮ್ಮ ಸ್ವಂತ ಶಾಸಕ ಏಕೆ ಹೇಳುತ್ತಿದ್ದಾರೆ?
9. ಮುಖ್ಯಮಂತ್ರಿ ಹುದ್ದೆಯೂ 2,500 ಕೋಟಿ ರೂಗೆ ಮಾರಾಟವಾಗಿದೆ ಎಂದು ನಿಮ್ಮ ಸ್ವಂತ ಶಾಸಕ ಏಕೆ ಹೇಳುತ್ತಿದ್ದಾರೆ?
10. ಕರ್ನಾಟಕದಲ್ಲಿ ಸರ್ಕಾರವಿಲ್ಲ ಮತ್ತು ನೀವು ಸುಮ್ಮನೆ ಸಮಯ ಕಳೆಯುತ್ತಿದ್ದೀರಿ ಎಂದು ನಿಮ್ಮದೇ ಸಚಿವರು ಹೇಳಿಲ್ಲವೇ? ಎಂದು ಸುರ್ಜೇವಾಲ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.












Click it and Unblock the Notifications