ಭಾಗ್ಯ ಫಲಾನುಭವಿಗಳೊಂದಿಗೆ ಭಾಗ್ಯವಿಧಾತ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಯ್ತು. ಈ ಅವಧಿಯಲ್ಲಿ ಅವರು, ಅವರ ಸಚಿವ ಸಂಪುಟ ಬಡವರು, ಹಿಂದುಳಿದವರು ಮತ್ತು ನಿರ್ಭಾಗ್ಯರಿಗೋಸ್ಕರ ಜಾರಿಗೆ ತಂದ ಜನಪ್ರಿಯ ಯೋಜನೆಗಳು ಹಲವಾರು.
ಉದಾಹರಣೆಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ, ರಾಜೀವ್ ಆರೋಗ್ಯ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಕೃಷಿ ಭಾಗ್ಯ ಹೀಗೆ ಅನೇಕ ಯೋಜನೆಗಳು ಬಡ ಜನರ ಪಾಲಿನ ಭಾಗ್ಯ. ಬಹುಚರ್ಚಿತ ಪಾಪ್ಯುಲರ್ ಸ್ಕೀಮುಗಳಲ್ಲಿ ಮೊದಲ ಸ್ಥಾನ ಅನ್ನಭಾಗ್ಯಕ್ಕೆ ಸಲ್ಲುತ್ತದೆ.
ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಕಲಚೇತನರು, ಲಿಂಗ ಅಲ್ಪಸಂಖ್ಯಾತರು, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ನಾನಾ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಸುಮಾರು 4.5 ಕೋಟಿಗೂ ಹೆಚ್ಚು ಜನರು ಸರ್ಕಾರದಿಂದ ಒಂದಲ್ಲ, ಒಂದು ರೀತಿಯಲ್ಲಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ಯೋಜನೆಗಳು ಸರಿಯಿಲ್ಲ, ಕೆಲವು ಯೋಜನೆಗಳಲ್ಲಂತೂ ಅನೇಕ ಲೋಪದೋಷಗಳಿವೆ. ನಮ್ಮ ತೆರಿಗೆಯ ಹಣ ಪೋಲಾಗುತ್ತಿದೆ. ಜನರನ್ನು ಸರಕಾರ ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಸಮಾಜದ ಒಂದು ವರ್ಗದ ಜನತೆ ಮತ್ತು ವಿರೋಧಪಕ್ಷಗಳು ಆರೋಪ ಮಾಡುತ್ತಲೇ ಇವೆ.
ಟೀಕೆ ಟಿಪ್ಪಣಿಗಳು ಹೇಗೂ ಇರಲಿ. ಸ್ವತಃ ಯೋಜನೆಗಳ ಫಲ ಅನುಭವಿಸುತ್ತಿರುವ ಜನತೆಯ ಅಭಿಪ್ರಾಯ ಏನು? ಅವರಿಗೆ ಸಂತೋಷ ಆಗಿದೆಯಾ? ಅಸಮಾಧಾನ ಇದೆಯಾ? ಕುಂದುಕೊರತೆಗಳು ಇವೆಯಾ? ಅವರ ಒಳದನಿಗೆ ಕಿವಿಯಾಗುವ ಒಂದು ಬಹಿರಂಗ ಸಭೆಗೆ ಈದೀಗ ವಿಶಿಷ್ಠವಾದ ವೇದಿಕೆ ಸಿದ್ಧವಾಗಿದೆ.
ಜನತೆಯ ಶ್ರೇಯೋಭಿವೃದ್ಧಿಗಾಗಿ ಜಾರಿಯಾದ ಯೋಜನೆಗಳ ಸದುದ್ದೇಶ ಈಡೇರಿದೆಯೇ ಇಲ್ಲವೇ? ಸರ್ಕಾರದಿಂದ ಜನರ ನಿರೀಕ್ಷೆ ಏನು ಎಂಬುದರ ಬಗ್ಗೆ ಫಲಾನುಭವಿಗಳಿಂದಲೇ ಅಭಿಪ್ರಾಯ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್. 27 ರ ಶನಿವಾರ ಮೈಸೂರಿನಲ್ಲಿ ಫಲಾನುಭವಿಗಳೊಂದಿಗೆ ಬಹಿರಂಗ ಸಂವಾದ ನಡೆಸಲಿದ್ದಾರೆ.

'ಜನ-ಮನ' ಶೀರ್ಷಿಕೆಯ ಸಂವಾದ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದೆ. ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸಂವಾದ ನಡೆಯುತ್ತದೆ. ರಾಜ್ಯದ ಎಲ್ಲ 30 ಜಿಲ್ಲೆಗಳಿಂದಲೂ, ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಅಪರೂಪದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.












Click it and Unblock the Notifications