ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಸಿಗಲಿದೆ ಇಷ್ಟು ಮೀಸಲಾತಿ: ಸಿಎಂ ಸಿಹಿಸುದ್ದಿ
ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಲಿ, ನಾನು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025ರ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸರ್ಕಾರವು ನಿಮಗೆ ಎಲ್ಲ ಸವಲತ್ತು ನೀಡಲಿದೆ. ಇದಕ್ಕೆ ಬದಲಾಗಿ ಒಲಂಪಿಕ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶಕ್ಕಾಗಿ ಮೆಡಲ್ ತರಬೇಕು. ಇದಷ್ಟೇ ನನ್ನ ಕೋರಿಕೆ ಎಂದು ಕೇಳಿಕೊಂಡಿದ್ದಾರೆ.

ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿದಂತೆ ಇನ್ನಿತರೆ ರಿಯಾಯಿತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
ಉದ್ಯೋಗದಲ್ಲಿ ಮೀಸಲಾತಿ: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 2ರಷ್ಟು ಉದ್ಯೋಗಗಳನ್ನು ಕ್ರೀಡಾಪಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ ಪೊಲೀಸ್, ಅರಣ್ಯ ಇಲಾಖೆ ಸೇರಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಶೇ 3ರಷ್ಟು ಉದ್ಯೋಗಗಳನ್ನು ಕ್ರೀಡಾಪಟುಗಳಿಗೆ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ.

ಮುಂದಿನ ಬಜೆಟ್‌ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗದಿ ಮಾಡುತ್ತೇನೆ. ಈ ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಬೇಕು. ಒಲಂಪಿಕ್‌ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡುತ್ತೇವೆ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್‌ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಜಾತಿಗಣತಿ ವರದಿ ಯಾವಾಗ?: ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿ ಬಗ್ಗೆಯೂ ಮಾತನಾಡಿದ್ದಾರೆ. ಈ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ, ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳು ಈ ಸಮೀಕ್ಷೆಯನ್ನು ಏಕೆ ವಿರೋಧಿಸುತ್ತಿವೆ? ವರದಿಯಲ್ಲಿ ಏನಿದೆ ಎಂದು ತಿಳಿಯದೇ ವಿರೋಧ ಹೇಗೆ ಮಾಡುತ್ತಾರೆ? ವರದಿ ಇನ್ನೂ ಬಹಿರಂಗಗೊಳ್ಳದಿರುವುದರಿಂದ ಈ ಬಗ್ಗೆ ನನಗೂ ತಿಳಿದಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಈ ಸಮೀಕ್ಷಾ ವರದಿಯನ್ನು ಮಂಡಿಸಲಾಗುವುದು ಎಂದು ಜನತೆಗೆ ಭರವಸೆ ನೀಡಲಾಗಿದೆ. ಅದರಂತೆ ನಡೆಯುತ್ತೇವೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.
ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025 ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ.ಗೋವಿಂದರಾಜು, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ ಸೇರಿ ಉಪಸ್ಥಿತರಿದ್ದರು.












Click it and Unblock the Notifications