ಕಾವೇರಿ ಹೋರಾಟ: ದೆಹಲಿ ತಲುಪುತ್ತಾ ಕನ್ನಡಿಗರ ಧ್ವನಿ?
ಕಾವೇರಿ ನದಿ ನೀರಿನ ಹೋರಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡ ಸವಾಲು ಎದುರಿಸಲು ಸಜ್ಜಾಗಿದೆ. ಅದರಲ್ಲೂ ಸಂಕಷ್ಟದ ಸಮಯದಲ್ಲೇ ತಮಿಳುನಾಡು ತೆಗೆದಿರುವ ತಗಾದೆಗೆ, ಸೂಕ್ತ ಉತ್ತರ ಕೊಡಲು ಸಜ್ಜಾಗಿದೆ ರಾಜ್ಯ ಸರ್ಕಾರ. ಎಲ್ಲಾ ಬೆಳವಣಿಗೆ ಮಧ್ಯೆ ಸಿಎಂ ಸಿದ್ದರಾಮಯ್ಯ ತಮಿಳುನಾಡು ಸರ್ಕಾರಕ್ಕೆ ಇದೀಗ ನೇರ ಸವಾಲು ಎಸೆಯುವಂತೆ ಮಾತನಾಡಿದ್ದಾರೆ.
ಹೌದು, ಕಾವೇರಿ ನೀರಿಗೆ ಸಂಬಂಧಿಸಿದಂತೆ ಸರ್ವ ಪಕ್ಷ ನಿಯೋಗ ದೆಹಲಿಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ & ಕೇಂದ್ರ ಜಲಸಂಪನ್ಮೂಲ ಸಚಿವರ ಸಮಯವನ್ನು ಕೋರಿದ್ದೇವೆ. ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ರಾಜ್ಯದ ಪರ ವಾದ ಮಂಡಿಸುವ ವಕೀಲರನ್ನು ಭೇಟಿ ಮಾಡಿ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇನ್ನು ಬುಧವಾರ ಕೇಸ್ ವಿಚಾರಣೆಗೆ ಬರಲಿದ್ದು, ನಮ್ಮ ವಾದ ಏನಿರಬೇಕು ಎಂದು ಸೂಕ್ತವಾದ ನಿರ್ದೇಶನ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಅಧಿಸೂಚನೆ
ಇನ್ನು ಕೇಂದ್ರ ಸಚಿವರು ಈಗ ಭೇಟಿಗೆ ಅವಕಾಶ ನೀಡಿದ್ದಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಒತ್ತಾಯಿಸುತ್ತೇವೆ. ಮಹಾದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದ್ದರೂ, ಅರಣ್ಯ & ಪರಿಸರ ತೀರುವಳಿ ದೊರೆತಿಲ್ಲ. ಈ ಯೋಜನೆಗೆ ತೀರುವಳಿ & ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಿಲ್ಲದ ಕಾರಣ ಹಾಗೂ ಕುಡಿವ ನೀರಿನ ಕೊರತೆಯಿಂದ ಸಂಕಷ್ಟದ ಸಮಯವನ್ನ ಎದುರಿಸುವಂತಾಗಿದೆ. ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ ಎಂದು ಸಿಎಂ ತಿಳಿಸಿದರು.
1 ಲಕ್ಷ ಕೋಟಿ ರೂಪಾಯಿ ಅಗತ್ಯ
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಪೂರ್ಣಗೊಳ್ಳಲು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 1 ಲಕ್ಷ ಕೋಟಿ ರೂಪಾಯಿ ಅಗತ್ಯ. 2023 ರ ಅಂದಾಜಿನ ಪ್ರಕಾರ 83700 ಕೋಟಿ ರೂ. ಇದ್ದು, ಯೋಜನೆ ಪೂರ್ಣ ಆಗುವವರೆಗೆ 1 ಲಕ್ಷ ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಿದ್ದು ಕೇಂದ್ರ ತ್ವರಿತಗತಿಯಲ್ಲಿ ಅಧಿಸೂಚನೆ ಹೊರಡಿಸಲಿ. ಆದಾಗ್ಯೂ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಗಮನಹರಿಸಲಾಗುವುದು ಎಂದು ಸಿಎಂ ಹೇಳಿದರು.

ಉತ್ತರ/ದಕ್ಷಿಣ ಎಂಬ ತಾರತಮ್ಯ ಇಲ್ಲ
ಮತ್ತೊಂದ್ಕಡೆ ಕೃಷ್ಣಾ, ಕಾವೇರಿ ಜೀವನದಿ. ಕಾವೇರಿ, ಕೃಷ್ಣಾ ನದಿ ಪಾತ್ರದಲ್ಲಿರುವವರೆಲ್ಲರೂ ನಮ್ಮ ರೈತರೇ. ಹೀಗಾಗಿ ತಾರತಮ್ಯ ಮಾಡುವ ಪ್ರಶ್ನೆಯೇ ಇರಲ್ಲ. ಅಖಂಡ ಕರ್ನಾಟಕದಲ್ಲಿ ದಕ್ಷಿಣ ಅಥವಾ ಉತ್ತರ ಎಂಬ ಪ್ರಶ್ನೆ ಇಲ್ಲ ಎಂದರು. ಈ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೂ, ರಾಜ್ಯ ಸರ್ಕಾರ ಸಮಾನ ಪ್ರಾತಿನಿಧ್ಯ ನೀಡುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ ಸಿಎಂ ಸಿದ್ದರಾಮಯ್ಯ.
ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ
ಹಾಗೇ ಮತ್ತೊಂದ್ಕಡೆ ಇಸ್ರೋ ಸಂಸ್ಥೆಯು ಆದಿತ್ಯ -ಎಲ್1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಲಾಗಿದೆ. ಚಂದ್ರಯಾನ -3 ರ ಯಶಸ್ಸಿ ಹಿನ್ನೆಲೆಯಲ್ಲಿ ಇದೀಗ ಇಸ್ರೋ ವಿಜ್ಞಾನಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಅಭಿನಂದನೆ ಸಮಾರಂಭ ಆಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ , ಸಚಿವರಾದ ಕೃಷ್ಣಬೈರೇಗೌಡ, ಯಶವಂತ ರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಠಲ ಕಟಕದೋಂಡ, ಸಂಸದ ರಮೇಶ್ ಜಿಗಜಿಣಗಿ, ಪಿ.ಸಿ. ಗದ್ದಿಗೌಡ ಇತರರು ಉಪಸ್ಥಿತರಿದ್ದರು.












Click it and Unblock the Notifications