Karnataka CM: ಸಿದ್ದರಾಮಯ್ಯ ಪ್ರಮಾಣ ವಚನ ಮುಹೂರ್ತ ಹೇಗಿದೆ ಗೊತ್ತಾ?
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಇಂದು ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶೀವಕುಮಾರ್ ಡಿಸಿಎಂ ಆಗಿ ಮತ್ತು ಇತರರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.30 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇದಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿವೆ. ಹಾಗಾದರೆ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಈ ದಿನ ಮುಹೂರ್ತ ಹೇಗಿದೆ ನೋಡಿ?
ಸಿದ್ದರಾಮಯ್ಯ ನವರ ಪದಗ್ರಹಣ ಸಮಯದ ಹೊತ್ತಿಗೆ ರೋಹಿಣಿ ನಕ್ಷತ್ರ ಬಂದಿರುತ್ತದೆ. ಇದು ಸಿಂಹ ಲಗ್ನದಲ್ಲಿ ಸ್ಥಾನ ಪಡೆದಿರುತ್ತದೆ. ಬಹಳ ಪ್ರಶಸ್ತವಾದ ಲಗ್ನ ಮತ್ತು ನಕ್ಷತ್ರ ಇದಾಗಿದೆ. ಶನಿವಾರ ಅಂತ ಸ್ವಲ್ಪ ಕಸಿವಿಸಿ ಉಂಟಾಗಬಹುದು ಬಿಟ್ಟರೆ ಈ ದಿನ ನಕ್ಷತ್ರ ಮಹೂರ್ತ ಎಲ್ಲ ತುಂಬಾ ಚೆನ್ನಾಗಿದೆ.

ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವವರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಜಿ ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಕೆ.ಜಿ ಜಾರ್ಜ್, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಶಾಸಕರು, ರಾಜ್ಯದೆಲ್ಲಡೆಯಿಂದ ಭಾಗವಹಿಸಲಿದ್ದಾರೆ.
ನೆರೆಯ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಇತರರಿಗೆ ಆಹ್ವಾನ ನೀಡಲಾಗಿದ್ದು, ಮೇ 20 ರಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಣ್ಯರ, ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ
ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರಮಾಣ ವಚನ ಸಮಾರಂಭ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸುವ ಗಣ್ಯರ ವಾಹನ ನಿಲುಗಡೆಗೆ ಸೇಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇತರೆ ವಾಹನ ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬಾದಾಮಿ ಹೌಸ್, ಯುನೈಟೆಡ್ ಮಿಷನ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅರಮನೆ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಮಾಣ ವಚನ ವೀಕ್ಷಿಸಲು ಮೈಸೂರಿನಿಂದ 10 ಸಾವಿರ ಕಾರ್ಯಕರ್ತರು
ಮೈಸೂರು: ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ವೀಕ್ಷಣೆಗೆ ಮೈಸೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ತೆರಳಿದ್ದಾರೆ. ಕಾಂಗ್ರೆಸ್ ನಗರಪಾಲಿಕೆ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಸ್ ವ್ಯವಸ್ಥೆ ಮಾಡಿದ್ದು, ಕೆಲವು ಕಾರ್ಯಕರ್ತರು ಬಸ್‌ನಲ್ಲಿ ತೆರಳಿದ್ದರೆ, ಉಳಿದವರು ಕಾರು ಹಾಗೂ ರೈಲಿನ ಮೂಲಕ ಬೆಂಗಳೂರು ತಲುಪಿದ್ದಾರೆ.
ಖಾತೆ ಹಂಚಿಕೆಗೂ ಚರ್ಚೆ
ಪ್ರಮಾಣ ವಚನ ಸ್ವೀಕಾರದ ಬಳಿಕ ಶನಿವಾರ ಸಂಜೆ ಹೊತ್ತಿಗೆ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರಕಾರ ಆದ್ಯತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಕ್ಷಣದಿಂದಲೇ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಖಾತೆ ಹಂಚಿಕೆ ಸಂಬಂದ ಹೈಕಮಾಂಡ್ ಅಂಗಳದಲ್ಲಿ ಚರ್ಚೆ ನಡೆಸಲಾಗಿದೆ. ಸಿಎಂ ಮತ್ತು ಡಿಸಿಎಂ ಅವರ ಈ ಪ್ರಸ್ತಾವಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ ಎನ್ನಲಾಗಿದೆ.












Click it and Unblock the Notifications