ಸಿಎಂ ಬದಲಾವಣೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮಹತ್ವದ ಸಂದೇಶ
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ಭುಗಿಲೆದ್ದಿದೆ. ಡಿ.ಕೆ.ಶಿವಕುಮಾರ್ ಅವರ ಬಣದ ಶಾಸಕರು ದೆಹಲಿಗೆ ತೆರಳಿ ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಯಾವುದೇ ಬಣವನ್ನು ಕಳಿಸಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಿಎಂ ಬದಲಾವಣೆ ಚರ್ಚೆಗಳು ಜೋರಾಗಿಯೇ ಇವೆ. ಇದರ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಹತ್ವದ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ಸುರ್ಜೆವಾಲ ಎಕ್ಸ್‌ನಲ್ಲಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. "ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದಾಗ, ಸೋತ ಮತ್ತು ಬಣಗಳಿಂದ ತುಂಬಿರುವ ಕರ್ನಾಟಕ ಬಿಜೆಪಿಯು ಮಾಧ್ಯಮದ ಒಂದು ಭಾಗದೊಂದಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಒಪ್ಪಿಕೊಂಡರು" ಎಂದು ಹೇಳಿದ್ದಾರೆ.
Had a discussion with Karnataka CM and Deputy CM and they agreed that a decisively defeated and faction ridden Karnataka BJP, alongwith a section of the media, are designedly running a maligning campaign against Karnataka and its Congress Government.
— Randeep Singh Surjewala (@rssurjewala) November 21, 2025
The sole idea is to…
"ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ವಿತರಣಾ ನ್ಯಾಯದ ಅತ್ಯುತ್ತಮ ಮಾದರಿಯಾಗಿರುವ ಕಾಂಗ್ರೆಸ್ ಸರ್ಕಾರದ 5 ಅದ್ಭುತ ಸಾಧನೆಗಳು ಮತ್ತು ಗ್ಯಾರಂಟಿಗಳನ್ನು ದುರ್ಬಲಗೊಳಿಸುವುದು ಅವರ ಏಕೈಕ ಉದ್ದೇಶವಾಗಿದೆ. ಕೆಲವು ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನಗತ್ಯ ಹೇಳಿಕೆಗಳು ಕೂಡ ಈ ಊಹಾಪೋಹಕ್ಕೆ ಮತ್ತಷ್ಟು ಪುಷ್ಠಿ ನೀಡಿವೆ" ಎಂದಿದ್ದಾರೆ.

"ರಾಜ್ಯ ಕಾಂಗ್ರೆಸ್ ನಾಯಕತ್ವದ ವಿಷಯದ ಬಗ್ಗೆ ಅಥವಾ ಸ್ಥಾಪಿತ ಹಿತಾಸಕ್ತಿಗಳು ಪ್ರಚಾರ ಮಾಡುತ್ತಿರುವ ಕಾರ್ಯಸೂಚಿಗೆ ಮಣಿಯದಂತೆ ಕಾಂಗ್ರೆಸ್ ಅವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ. ಪಕ್ಷದ ವಿವಿಧ ಕಾರ್ಯಕರ್ತರ ಅಭಿಪ್ರಾಯವನ್ನು ಕೂಡ ಹೈಕಮಾಂಡ್ ನಾಯಕರು ಗಮನಿಸಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ನಾನೇ ಸಿಎಂ ಆಗಿರುತ್ತೇನೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ಪಕ್ಷದ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಕೊಟ್ಟ ಮಾತಿಗೆ ನಾನೆಂದೂ ತಪ್ಪಲ್ಲ. ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿಯ ಭರವಸೆಯನ್ನು ಈಡೇರಿಸಿದ್ದೇನೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರೆದು, ಮುಂದಿನ ಬಜೆಟ್‌ಗಳನ್ನು ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.

ಸಿಎಂಗೆ ಶುಭ ಹಾರೈಸುವೆ
ಡಿಕೆಶಿ ಬಣದ ಶಾಸಕರು ದೆಹಲಿಗೆ ಹೋಗಿರುವ ವಿಚಾರವಾಗಿ ಡಿ.ಕೆ.ಶಿವಕುಮಾರ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಗುಂಪುಗಾರಿಕೆ ಮಾಡುವುದು ನನ್ನ ರಕ್ತದಲ್ಲಿಯೇ ಇಲ್ಲ. ಪಕ್ಷದ ಎಲ್ಲ 140 ಶಾಸಕರಿಗೂ ನಾನು ಅಧ್ಯಕ್ಷ. ಮುಖ್ಯಮಂತ್ರಿಗಳು ಸಂಪುಟ ಪುನರ್‌ರಚನೆ ಮಾಡಲು ನಿರ್ಧರಿಸಿದ್ದಾರೆ. ಎಲ್ಲರೂ ಸಚಿವರಾಗಲು ಬಯಸುತ್ತಾರೆ, ಆದ್ದರಿಂದ ಅವರು ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗುವುದು ಸಹಜ ಎಂದಿದ್ದಾರೆ.
ಅದು ಶಾಸಕರ ಹಕ್ಕು. ನಾವು ಅವರನ್ನು ತಡೆದು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ವರ್ಷಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ. ನಾವೆಲ್ಲರೂ ಅವರೊಂದಿಗೆ ಕೆಲಸ ಮಾಡುತ್ತೇವೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಹೈಕಮಾಂಡ್ ಮಾತಿಗೆ ಬದ್ಧರಾಗಿರುತ್ತೇವೆ ಎಂದು ಪದೇ ಪದೇ ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications