Janivara Controversy: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ; ಅಧಿಕಾರಿ ಅಮಾನತು
January Controversy: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಯೋಜನೆ ಮಾಡಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ವಸ್ತ್ರ ಸಂಹಿಯತೆ ಹೇಳೋದೇನು ಎಂದು ಇಲ್ಲಿ ತಿಳಿಯಿರಿ.
ಶಿವಮೊಗ್ಗ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಕೇಳಿ ಬಂದಿದೆ. ಇದಕ್ಕೆ ಬ್ರಾಹ್ಮಣ ಸಚಿವರು, ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಇದೀಗ ಪರೀಕ್ಷಾ ಕೇಂದ್ರದ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆದೇಶ ಹೊರಡಿಸಿದ್ದಾರೆ.

ಬೀದರ್ನಲ್ಲಿಯೂ ಇದೇ ರೀತಿ ಪ್ರಕರಣ ವರದಿ ಆಗಿದ್ದು, ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ಅಮಾನತು ಮಾಡುವುದು ಅಷ್ಟೇ ಅಲ್ಲದೆ ಕ್ಷಮೆ ಕೇಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಸರ್ಕಾರಕ್ಕೆ ಆಗ್ರಹಿಸಿದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಗಳು ಇದೇ ಏಪ್ರಿಲ್ 15, 16, 17 ನಡೆದಿವೆ. ಆದರೆ ಕೊನೆಯ ದಿನವಾದ ಏಪ್ರಿಲ್ 17ರಂದು ಶಿವಮೊಗ್ಗ ಹಾಗೂ ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೀದರ್ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರಗೊಂಡಿದೆ. ಮತ್ತೊಂದೆಡೆ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯುವುದಿಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆಕ್ರೋಶಗಳು ಭುಗಿಲೆದ್ದಿವೆ.
ಪುರುಷರ ವಸ್ತ್ರ ಸಂಹಿತೆ
* ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆ ಧರಿಸುವಂತಿಲ್ಲ
* ಕಾಲರ್ ರಹಿತ ನಾರ್ಮಲ್ ಶರ್ಟ್/ ಟೀ ಶರ್ಟ್‌ಗೆ ಆದ್ಯತೆ
* ಜೇಬುಗಳು ಕಡಿಮೆ ಇರುವ ಸರಳ ಪ್ಯಾಂಟ್ ಧರಿಸಿರಬೇಕು.
* ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್‌ಗೆ ನಿರ್ಬಂಧ
* ಪರೀಕ್ಷಾ ಕೊಠಡಿಯೊಳಗೆ ಶೂ ಧರಿಸುವಂತಿಲ್ಲ.
* ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.
* ಕಿವಿಯೋಲೆ, ಕಡಗ ಧರಿಸುವಂತಿಲ್ಲ.
ಮಹಿಳೆಯರ ವಸ್ತ್ರ ಸಂಹಿತೆ
* ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ ಹೂ ಬಟನ್ ಹೊಂದಿರುವ ಬಟ್ಟೆ ಧರಿಸುವುದು ನಿಷೇಧ.
* ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆಯನ್ನು ಧರಿಸಬರಾದು, ಬದಲಾಗಿ ಅರ್ಧ ತೋಳಿನ ಬಟ್ಟೆ ಮುಜುಗರ ಆಗದಿರುವಂತಹ ಬಟ್ಟೆ ಧರಿಸಬೇಕು.
* ದಪ್ಪ ಹೀಲ್ಸ್ ಬಳಕೆಗೆ ನಿರ್ಬಂಧ
* ಪ್ಪವಾದ ಶೂ, ದಪ್ಪದ ಚಪ್ಪಲಿಗೆ ನಿರ್ಬಂಧ.
* ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ ಧರಿಸುವುದು ನಿಷೇಧ.
* ಕಿವಿ ಓಲೆ ಉಂಗುರ ಧರಿಸುವ ಹಾಗಿಲ್ಲ.
* ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಲು ಅವಕಾಶ.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ ಮತ್ತು ಕಾಲುಂಗುರ ತೆಗೆಸಿರುವ ಪ್ರಕರಣ ನಡೆದಿದ್ದವು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕೆಇಎ ಮಂಗಳಸೂತ್ರ ಮತ್ತು ಕಾಲುಂಗುರಕ್ಕೆ ಅವಕಾಶ ನೀಡಿತ್ತು. ಆದರೆ ಇದೀಗ ಜನಿವಾರ ವಿವಾದದ ಕಿಚ್ಚು ಹೊತ್ತಿಕೊಂಡಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರತಿಕ್ರಿಯಿಸಿ, ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಎಂದು ಹೇಳಿದ್ದು ತಪ್ಪು. ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಮಾರ್ಗಸೂಚಿ ಸಿದ್ಧ ಮಾಡುವುದಿಲ್ಲ. ಈಗ ತಪ್ಪಾಗಿದ್ದು, ಇಂತಹ ತಪ್ಪು ಮುಂದೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.












Click it and Unblock the Notifications