Karnataka Caste Census: ಕರ್ನಾಟಕ ಜಾತಿ ಗಣತಿ ವರದಿಯಲ್ಲಿ ಯಾರು ಮೊದಲು, ಯಾರು ಕೊನೆ.. ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 01: ಕರ್ನಾಟಕ ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ಬಹು ನಿರೀಕ್ಷಿತ ವರದಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (ಕೆಎಸ್‌ಸಿಬಿಸಿ) ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ, ಈ ಜಾತಿ ಗಣತಿ ವರದಿಯು 48 ಸಂಪುಟಗಳನ್ನು ಹೊಂದಿದ್ದು, ಮುಖ್ಯ ಶಿಫಾರಸು ಕಿರುಪುಸ್ತಕವು 200 ಪುಟಗಳನ್ನು ಹೊಂದಿದೆ. ಪ್ರತಿಯೊಂದು ಸಂಪುಟವು ವಿವಿಧ ಜಾತಿಗಳ ಗುಂಪಿನ ಡೇಟಾವನ್ನು ಹೊಂದಿದೆ. ವರದಿಯು ವಿಧಾನಸಭಾ ಕ್ಷೇತ್ರಗಳ ಆಧಾರದ ಮೇಲೆ ಜಾತಿ ಅಂಕಿ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಹಿಂದಿನ ವರದಿಗಳಲ್ಲಿ ಸೇರಿಸದ ಸಣ್ಣ ಜನಸಂಖ್ಯೆಯನ್ನು ಹೊಂದಿರುವ ಜಾತಿಗಳ ವಿವರಗಳನ್ನು ಒಳಗೊಂಡಿದೆ. ಒಟ್ಟು 1,351 ವಿವಿಧ ಜಾತಿಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯಲ್ಲಿ 5.98 ಕೋಟಿ ಜನರನ್ನು ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 3.98 ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಗುಂಪಿನವರು, 1.87 ಕೋಟಿ ಲಿಂಗಾಯತರು, ವೊಕ್ಕಲಿಗರು, ಬ್ರಾಹ್ಮಣರು ಮತ್ತು ಇತರ ಜಾತಿಗಳು ಇದರಲ್ಲಿ ಇವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಸಮಿತಿಯು ಶಿಫಾರಸು ಮಾಡಿದೆ. ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತಿಹೇಳಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 6 ಕೋಟಿ ಕನ್ನಡಿಗರಲ್ಲಿ ಯಾವ ಜಾತಿ ಹಾಗೂ ಧರ್ಮದವರು ಎಷ್ಟು ಮಂದಿ ಇದ್ದಾರೆ ಎಂಬ ಅಂಕಿ-ಸಂಖ್ಯೆಯೂ ಬಹಿರಂಗವಾಗಿದೆ. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಜನಸಂಖ್ಯೆಯೇ ಅಧಿಕವಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ವರದಿಯ ಅನ್ವಯ ಕರ್ನಾಟಕದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.60ರಷ್ಟು ಇದೆ. ಅಂದರೆ 1.08 ಕೋಟಿ.

ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಅಂದರೆ ಮುಸ್ಲಿಮರು 70 ಲಕ್ಷ ಜನರಿದ್ದಾರೆ. ಇನ್ನು ಲಿಂಗಾಯತರು 65 ಲಕ್ಷ ಮತ್ತು ಒಕ್ಕಲಿಗ ಸಮುದಾಯ 60 ಲಕ್ಷವಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಹೀಗಾಗಿ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹೋಲಿಸಿದರೇ ಅಲ್ಪಸಂಖ್ಯಾತ ಸಮುದಾಯವೇ ಬಹುಸಂಖ್ಯಾತರಾಗಿದ್ದಾರೆ.
ರಾಜ್ಯದ ಜಾತಿವಾರು ಅಂಕಿ ಅಂಶಗಳು
ರಾಜ್ಯದಲ್ಲಿ ಒಟ್ಟು 1,351 ವಿವಿಧ ಜಾತಿಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 816 ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. ಹೊಸದಾಗಿ 192 ಜಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಸುಮಾರು 30 ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ 6 ಕೋಟಿ ಕನ್ನಡಿಗರಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಲಾಗಿದೆ.
* ಪರಿಶಿಷ್ಟ ಜಾತಿ(ಎಸ್‌ಸಿ): 1.08 ಕೋಟಿ ಮಂದಿ
*ಮುಸ್ಲಿಂ: 70 ಲಕ್ಷ ಮಂದಿ
* ಲಿಂಗಾಯತರು: 65 ಲಕ್ಷ ಮಂದಿ
* ಒಕ್ಕಲಿಗರು: 60 ಲಕ್ಷ ಮಂದಿ
* ಕುರುಬರು: 45 ಲಕ್ಷ ಮಂದಿ
* ಈಡಿಗರು : 15 ಲಕ್ಷ ಮಂದಿ
*ಪರಿಶಿಷ್ಟ ಪಂಗಡ (ಎಸ್‌ಟಿ) : 40.45 ಲಕ್ಷ ಮಂದಿ
* ವಿಶ್ವಕರ್ಮ: 15 ಲಕ್ಷ ಮಂದಿ
* ಬೆಸ್ತರು : 15 ಲಕ್ಷ ಮಂದಿ
* ಬ್ರಾಹ್ಮಣರು : 14 ಲಕ್ಷ ಮಂದಿ
* ಗೊಲ್ಲ (ಯಾದವ) : 10 ಲಕ್ಷ ಮಂದಿ
* ಮಡಿವಾಳ ಸಮಾಜ : 6 ಲಕ್ಷ ಮಂದಿ
* ಅರೆ ಅಲೆಮಾರಿ: 6 ಲಕ್ಷ ಮಂದಿ
* ಕುಂಬಾರ : 5 ಲಕ್ಷ ಮಂದಿ
* ಸವಿತಾ ಸಮಾಜ : 5 ಲಕ್ಷ ಮಂದಿ
(ಅಂಕಿ ಅಂಶ ಮಾಹಿತಿ: ಟಿವಿ9)












Click it and Unblock the Notifications