ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ, ವೇತನ ಕುರಿತು ಮಹತ್ವದ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯ ಸರ್ಕಾರ ಶಿಕ್ಷಕರಿಗೆ ಅನುಕೂಲ ಆಗುವಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ, ಬಡ್ತಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಿನ್ನೆ ನಡದ ಸಂಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ವೇಳೆ ಪದವಿ, ಟಿಇಟಿ ಪ್ರಮಾಣ ಪತ್ರ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಬಾರಿ ವೇತನ ಬಡ್ತಿ ಹಾಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಅವಕಾಶ ಕಲ್ಪಿಸಿಕೊಡಲು ವೃಂದ ಹಾಗೂ ನೇಮಕಾತಿ ನಿಯಮ 2017ಕ್ಕೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಕ್ಕೆ 2017ರಲ್ಲಿ ತರುವುದಕ್ಕೆ ಮೊದಲು ಜಾರಿಯಲ್ಲಿ ಇದ್ದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ಮತ್ತು 7ನೇ ತರಗತಿವರೆಗೂ ಬೋಧಿಸಲು ಅವಕಾಶ ಸಿಗಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದವಿ ಮತ್ತು ಟಿಇಟಿ ಸರ್ಟಿಫಿಕೆಟ್ ಹೊಂದಿರುವ ಶಾಲಾ ಶಿಕ್ಷಕರಿಗೆ ಸಂಚಿತ ಪರಿಣಾಮ ಹೊಂದಿಲ್ಲದಂತೆ ಒಂದು ಬಾರಿಯ ವೇತನ ಬಡ್ತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.
6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಅವಕಾಶ ನೀಡಲು ಮತ್ತು ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚನೆ ನೀಡಲಾಗಿದೆ. ಹೀಗೆ ಶಿಕ್ಷಕರಿಗೆ ಅನುಕೂಲ ಆಗುವಂತೆ ಸರ್ಕಾರ ಆಗಾಗ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಇದನ್ನು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನ ಸಹ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಎಚ್‌ಕೆ ಪಾಟೀಲ್ ಹೇಳಿದ್ದೇನು?: ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಏನೆಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಚ್‌ಕೆ ಪಾಟೀಲ್ ವಿವರಿದ್ದಾರೆ. ರೈತರು, ಕನ್ನಡಪರ ಹೋರಾಟಗಾರರ ವಿರುದ್ಧದ 60 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕ ಬದಲಾವಣೆ ಮಾಡಲಾಗಿದ್ದು, ಮಾರುಕಟ್ಟೆ ಶುಲ್ಕ 41ರಿಂದ 42 ಪೈಸೆಗೆ ಹೆಚ್ಚಳ ಮಾಡಲಾಗುವುದು. ವಹಿವಾಟು ವೆಚ್ಚ 0.01 ಪೈಸೆಗೆ ಹೆಚ್ಚಳ ಮಾಡಿ ಮಾರ್ಪಾಡು ಮಾಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲು 52.85 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕಣ್ಣಿನ ಉಚಿತ ತಪಾಸಣೆಯೇ ಆಶಾಕಿರಣ ಯೋಜನೆ ಆಗಿದೆ. ಅಂಧತ್ವ ನಿವಾರಣಾ ಕಾರ್ಯಕ್ರಮವನ್ನೂ ಒಳಗೊಂಡ ಯೋಜನೆಗೆ ರಾಜ್ಯಾದ್ಯಂತ ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು. ಇನ್ನಯ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.












Click it and Unblock the Notifications