Bus Fare Hike: ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ, ಅಧಿಕೃತ ಆದೇಶ
ಬೆಂಗಳೂರು, ಜನವರಿ 02: ಹೊಸ ವರ್ಷಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ಕೊಟ್ಟಿದೆ. ಸಾರ್ವಜನಿಕ ಸಾರಿಗೆ ಪ್ರಯಾಣವು ಮತ್ತಷ್ಟು ದುಬಾರಿ ಆಗಲಿದೆ. ನಾಲ್ಕು ನಿಗಮಗಳ ಬಹುದಿನಗಳ ಬೇಡಿಕೆ ಈಡೇರಿಸಲು ಮುಂದಾಗಿರುವ ಸರ್ಕಾರ ಬಸ್ ಟಿಕೆಟ್ ದರ ಏರಿಕೆಗೆ ಅಸ್ತು ಎಂದಿದೆ. ಬಸ್ ಪ್ರಯಾಣವನ್ನು ಶೇಕಡಾ 15ರಷ್ಟು ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿ ಅನುಮೋದನೆ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಅಧಿಕಾರಿಗಳು ತಿಂಗಳುಗಳ ಬೇಡಿಕೆ ಈಡೇರಿದಂತಾಗದೆ. ಸದ್ಯ ಸರ್ಕಾರ ಬಸ್ ಟಿಕೆಟ್ ದರ ಏರಿಕೆ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದು ಬಾಕಿ ಇದೆ.

ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳು ಕೆಲವು ತಿಂಗಳುಗಳಿಂದ ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಹಲವು ಬಾರಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಕುರಿತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರೇ ಮಾಹಿತಿ ನೀಡಿದ್ದಾರೆ. ಸರ್ಕಾರ ಟಿಕೆಟ್ ದರ ಹೆಚ್ಚಳ ಬಗ್ಗೆ ನಿರ್ಧರಿಸಲಿದೆ ಎಂದು ಅವರು ಹೇಳಿದ್ದರು.
ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಾಲ್ಕು ನಿಗಮ ಟಿಕೆಟ್ ದರ ಏರಿಕೆ ಕುರಿತು ಅನುಮೋದನೆ ನೀಡಲಾಗಿದೆ. ಶೇಕಡಾ 15ರಷ್ಟು ಟಿಕೆಟ್ ದರ ಏರಿಕೆ ಆಗಬಹುದು ಎಂದು ಹೇಳಲಾಗಿದೆ. ಈ ಕುರಿತು ಅಧಿಕೃತ ಆದೇಶ ಬಂದಲ್ಲಿ, ಯಾವಾಗಿನಿಂದ ಈ ಹೊಸ ದರ ಜಾರಿ ಆಗಲಿದೆ, ಸಲಹೆ, ಸೂಚನೆಗಳು ತಿಳಿಯಲಿವೆ.
ನಾಲ್ಕು ವರ್ಷಗಳ ಬಳಿಕ ಮತ್ತೆ ದರ ಪರಿಷ್ಕರಣೆ
ರಾಜ್ಯದಲ್ಲಿ ನಾಲ್ಕು ನಿಗಮಗಳ ಬಸ್ ಸಂಚಾರದ ಖರ್ಚು ಹೆಚ್ಚಾಗುತ್ತಿದೆ. ಬದಲಾದ ಸನ್ನಿವೇಶದಲ್ಲಿ ಬಸ್ ನಿರ್ವಹಣೆ ಖರ್ಚು ಹೆಚ್ಚಾಗಿದೆ. ಬರುವ ಆದಾಯ ಬಸ್ ನಿರ್ವಹಣೆ, ನೌಕರರಿಗೆ ವೇತನ, ಇಂಧನ ಮತ್ತಿತರ ಖರ್ಚುಗಳಿಗೆ ಆಗುತ್ತಿದೆ. ಅಲ್ಲದೇ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಉಚಿತವಾಗಿ ಬಸ್ ಸಂಚಾರ ನಡೆಸುತ್ತಿದ್ದಾರೆ. ಇದು ಸಹ ನಿರ್ವಹಣೆ ಖರ್ಚಿನ ಮೇಲೆ ಪರಿಣಾಮ ಬೀರಿದೆ.
ಈ ಕಾರಣದಿಂದಲೇ ಸಾರಿಗೆ ನಿಗಮಗಳ ಅಧಿಕಾರಿಗಳು ಬೆಲೆ ಏರಿಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ 2020ರಲ್ಲಿ ಬಸ್ ದರ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಮತ್ತೆ ಹೆಚ್ಚಿಸಿರಲಿಲ್ಲ. ಇದೀಗ ನಾಲ್ಕು ವರ್ಷದ ನಂತರ ಸರ್ಕಾರ ಬಸ್ ಟಿಕೆಟ್ ದರ ಏರಿಕೆ ಮಾಡಿ ಅಧಿಕೃತವಾಗಿ ಘೋಷಿಸಿದೆ.












Click it and Unblock the Notifications