Karnataka By-Election 2024 Results: ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಶುರು, ಮೂವರ ರಾಜಕೀಯ ಭವಿಷ್ಯ ನಿರ್ಧಾರ
ಬೆಂಗಳೂರು, ನವೆಂಬರ್ 23: ಕರ್ನಾಟಕದ ಬಹು ನಿರೀಕ್ಷೆಯ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ಕ್ಷೇತ್ರಗಳ ಉಪ ಚುನಾವಣೆ 2024 ಫಲಿತಾಂಶ ಇಂದು ನವೆಂಬರ್ 23ರಂದು ಶನಿವಾರ ಪ್ರಕಟಗೊಳ್ಳಲಿದೆ. ಅಭ್ಯರ್ಥಿಗಳಿಂದ ದೇವರ ಪೂಜೆ, ಗೆಲುವಿಗಾಗಿ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಇಂದು ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಇಂದು ಬೆಳಗ್ಗೆ 7ಗಂಟೆಗೆ ರಾಜ್ಯ ಚುನಾವಣೆ ಆಯೋಗದ ಸಿಬ್ಬಂದಿಯು ಸ್ಟ್ರಾಂಗ್ ರೂಮ್‌ನಿಂದ ಮತದಾನ ಬಳಿಕ ಇಡಲಾಗಿದ್ದ ಇವಿಎಂ ಮಷಿನ್ ಗಳನ್ನು ರಾಜಕೀಯ ನಾಯಕರು, ಪೊಲೀಸರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಿದ್ದಾರೆ. ಬಳಿಕ ಮತದಾನ ಆರಂಭವಾಗಲಿದೆ.

ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಅಗತ್ಯ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ಎನ್‌ಡಿಎ ಅಭ್ಯರ್ಥಿಗಳೇ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹಿತ ತಮ್ಮ ಅಭ್ಯರ್ಥಿಳಿಗೆ ಗೆಲುವು ಧಕ್ಕಲಿದೆ ಎಂದು ಭವಿಷ್ಯ ನುಡಿಸಿದ್ದಾರೆ.
ಚುನಾವಣೋತ್ತರವಾಗಿ ಪ್ರಕಟವಾದ ಎಕ್ಸಿಟ್ ಪೋಲ್ ಫಲಿತಾಂಶವು ಎನ್‌ಡಿಎ ಪರವಾಗಿದೆ. ಇಂದು ರಾಜ್ಯ ಚುನಾವಣೆ ಆಗೋದಿಂದ ಪ್ರಕಟಗೊಳ್ಳಲಿರುವ ಅಧಿಕೃತ ಫಲಿತಾಂಶವನ್ನು ಆಯಾ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಜನರು ಎದುರು ನೋಡುತ್ತಿದ್ದಾರೆ.
ಶಿಗ್ಗಾವಿ ಹಾಗೂ ಚನ್ನಪಟ್ಟಣ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಇನ್ನೂ ಚನ್ನಪಟ್ಟಣ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಇಂದಿನ ಗೆಲುವು ರಾಜಕೀಯದಲ್ಲಿ ಒಂದಷ್ಟು ಬೆಳವಣಿಗೆಗೆ ಕಾರಣವೂ ಆಗಬಹುದೆಂದು ಊಹಿಸಲಾಗಿದೆ.
ಚನ್ನಪಟ್ಟಣದಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ ಅವರು ಕಣಕ್ಕಿಳಿದರು. ಇಲ್ಲಿ ತೀವ್ರ ಪೈಪೋಟಿ ಕಂಡು ಬಂತು. ಶಿಗ್ಗಾವಿಯಲ್ಲಿ ಬಿಜೆಪಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಯಾಸಿರ್ ಖಾನ್ ಪಠಾಣ್ ಜಿದ್ದಿಗೆ ಬಿದ್ದಿದ್ದರು. ಸಂಡೂರಿನಲ್ಲಿ ಬಿಜೆಪಿಯಿಂದ ಬಂಗಾರು ಹನುಮಂತು ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ಅನ್ನಪೂರ್ಣ ಅವರು ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.
ಕರ್ನಾಟಕ ಉಪಚುನಾವಣೆ ವೇಳೆ ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.88.81ರಷ್ಟು ಮತದಾನವಾಗಿದ್ದರೆ, ಶಿಗ್ಗಾವಿಯಲ್ಲಿ ಶೇ.80.72 ಮತ್ತು ಸಂಡೂರು ಕ್ಷೇತ್ರದಲ್ಲಿ ಶೇ.76.24ರಷ್ಟು ಮತದಾನ ಆಗಿದೆ. ಕ್ಷೇತ್ರದ ಜನರಲ್ಲಿ ಗೆಲುವು ಯಾರಿಗೆ ಸಿಗಲಿದೆ ಎಂಬ ಕೌತುಕ ಹೆಚ್ಚಾಗಿದೆ.












Click it and Unblock the Notifications