Karnataka Budget: ಸೋಮವಾರದಿಂದ ಬಜೆಟ್ ಅಧಿವೇಶನ, ಸಿದ್ದರಾಮಯ್ಯ ಮೇಲೆ ಎಲ್ಲರ ಕಣ್ಣು

ಬೆಂಗಳೂರು, ಮಾರ್ಚ್‌ 02: ಕರ್ನಾಟಕ ಸರ್ಕಾರ 2025-26ನೇ ಸಾಲಿನ ಬಜೆಟ್ ಮಂಡನೆಗೆ ತಯಾರಾಗಿದೆ. ವಿಧಾನ ಮಂಡಲದ ಬಜೆಟ್ ಅಧಿವೇಶನ ಮಾರ್ಚ್ 3ರ ಸೋಮವಾರ ಆರಂಭವಾಗಲಿದೆ. ವಿಧಾನಸಭೆ ಅಧಿವೇಶನ ಮಾರ್ಚ್ 21ರ ತನಕ ನಡೆಯಲಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ಬಜೆಟ್ ಮಂಡಿಸಲಿದ್ದಾರೆ. 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಅವರು ದಾಖಲೆಯನ್ನು ಮಾಡಲಿದ್ದಾರೆ.

ಮಾರ್ಚ್ 3ರ ಸೋಮವಾರ ಕರ್ನಾಟಕ ಬಜೆಟ್ ಅಧಿವೇಶನ 2025 ಆರಂಭವಾಗಲಿದೆ. ಅಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ.

Karnataka Budget Session 2025-26 From March 3

ಮಾರ್ಚ್ 7ರ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಕಲಾಪ ಇರುವುದಿಲ್ಲ. ಸೋಮವಾರದಿಂದ ಪುನಃ ಬಜೆಟ್ ಮೇಲಿನ ಚರ್ಚೆಗಳು ಆರಂಭವಾಗಲಿವೆ. ಮಂಡಿ ನೋವಿನ ಕಾರಣ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಸುಮಾರು ಒಂದೂವರೆ ತಾಸು ನಿಂತು ಬಜೆಟ್ ಮಂಡಿಸಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಲಾಪದಲ್ಲಿ ಕಾವೇರಿದ ಚರ್ಚೆ: ಮುಡಾ ಪ್ರಕರಣ, ಗ್ಯಾರಂಟಿ ಯೋಜನೆಗಳ ಅಸಮರ್ಪಕ ಅನುಷ್ಠಾನ, ಸಾಲದ ಸುಳಿಯಲ್ಲಿ ಸರ್ಕಾರ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿವೆ. ಪ್ರತಿಪಕ್ಷಗಳಿಗೆ ಖಡಕ್ ತಿರುಗೇಟು ನೀಡಲು ಆಡಳಿತ ಪಕ್ಷದ ಸಚಿವರು, ಶಾಸಕರು ಸಿದ್ಧವಾಗುತ್ತಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಕಾಂಗ್ರೆಸ್ ತಯಾರಿ ನಡೆಸಿದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಸಭಾಪತಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಿದೆ. ಈ ಕುರಿತು ಈಗಾಗಲೇ ಸಭಾಪತಿಗಳೇ ಹೇಳಿಕೆ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊಡುವುದು, ಬೊಕ್ಕಸ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು ಸೇರಿ ಸಿದ್ದರಾಮಯ್ಯ ಬಜೆಟ್‌ ಬಹಳ ಸವಾಲಿನ ಕೆಲಸವಾಗಿದೆ. ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಎಲ್ಲಾ ಸೇರಿ ದಾಖಲೆಯ 16ನೇ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ.

ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗುತ್ತಿರುವುದರಿಂದ ಬಜೆಟ್‌ನಲ್ಲಿ ಕೊಡುಗೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಫೆಬ್ರವರಿ 6ರಿಂದ ನಿರಂತರವಾಗಿ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿದ್ದಾರೆ.

2023ರ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2023ರ ಜುಲೈನಲ್ಲಿ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು. ಇದು ಅವರು ಮಂಡಿಸಿದ 14ನೇ ಬಜೆಟ್ ಆಗಿತ್ತು. ಬಳಿಕ 2024-25ರ ಬಜೆಟ್‌ ಅನ್ನು ಮಂಡಿಸಿ 15 ಬಾರಿ ಬಜೆಟ್ ಮಂಡಿಸಿದ ಸಾಧನೆಯನ್ನು ಅವರು ಮಾಡಿದ್ದರು.

ಐದು ಗ್ಯಾರಂಟಿ ಯೋಜನೆಗಳ ಘೋಷಣೆ, ಅನುಷ್ಠಾನದ ಬಳಿಕ ಕರ್ನಾಟಕ ಸರ್ಕಾರ ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಿದ್ದು ಸಿದ್ದರಾಮಯ್ಯ ಸಾಧನೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. 2025-26ನೇ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+