'ಇಂದು ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕ ಘೋಷಣೆ'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 31 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ವಿಚಾರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. 'ಗುರುವಾರ ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕ ಘೋಷಣೆ ಮಾಡುತ್ತೇವೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.

ಗುರುವಾರದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಪಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಸಚಿವ ಕಿಮ್ಮನೆ ರತ್ನಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದವು. [ಇಂದು ನಡೆಯಬೇಕಿದ್ದ ರಸಾಯನಶಾಸ್ತ್ರ ಮರು ಪರೀಕ್ಷೆ ರದ್ದು]

kimmane rathnakar

ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಮೂರು ವರ್ಷಗಳಿಂದ ಸಚಿವರಾಗಿದ್ದೀರಿ. ಇಲಾಖೆಯ ಅಧಿಕಾರಿಗಳ ಮೇಲೆ ಹಿಡಿತವಿಲ್ಲವೇ?. ಪದೇ-ಪದೇ ಪ್ರಶ್ನೆ ಪತ್ರಿಕೆ ಹೇಗೆ ಸೋರಿಕೆಯಾಗಲು ಸಾಧ್ಯ?, ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಿ' ಎಂದು ಸಚಿವ ಕಿಮ್ಮನೆ ರತ್ನಾಕರ ಅವರನ್ನು ಒತ್ತಾಯಿಸಿದರು. [ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಹೇಗೆ ದೂರು ನೀಡಬೇಕು?]

ಉತ್ತರ ನೀಡಿದ ಸಚಿವರು : ಪ್ರತಿಪಕ್ಷದ ಗದ್ದಲದ ನಡುವೆಯೇ ಸದನಕ್ಕೆ ಉತ್ತರ ನೀಡಿದ ಸಚಿವ ಕಿಮ್ಮನೆ ರತ್ನಾಕರ್ ಅವರು, 'ಪಿಯು ಮಂಡಳಿಯಿಂದ ತಪ್ಪಾಗಿದೆ ನಿಜ. ಇಲಾಖೆಯ ನಿರ್ದೇಶಕರೇ ಇದಕ್ಕೆ ನೇರ ಹೊಣೆಗಾರರು. ಗುರುವಾರ ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ' ಎಂದು ಹೇಳಿದರು. [ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಸಿಐಡಿ ವಶಕ್ಕೆ]

'ಇಲಾಖೆಯಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ತಂಡವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುತ್ತದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೂ ಸಭೆ ನಡೆಸಿದ್ದೇನೆ. ಪತ್ರಿಕೆ ಸೋರಿಕೆಯಲ್ಲಿ ಯಾವುದೇ ಅಧಿಕಾರಿಗಳು ಭಾಗಿಯಾಗಿದ್ದರೂ, ಅವರನ್ನು ಅಮಾನತು ಮಾಡಲು ಸೂಚನೆ ನೀಡಿದ್ದೇನೆ' ಎಂದು ಸಚಿವರು ವಿವರಣೆ ನೀಡಿದರು.

ಪರೀಕ್ಷೆ ರದ್ದು : ಗುರುವಾರ ಮಾರ್ಚ್ 31ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಮಾರ್ಚ್ 21ರಂದು ನಡೆದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದುಗೊಳಿಸಿ, ಇಂದು ಮರು ಪರೀಕ್ಷೆ ನಡೆಸಲು ಆದೇಶ ನೀಡಲಾಗಿತ್ತು. ಇಂದು ಪುನಃ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Budget session 2016 : Thursday March 31 highlights. What happened in the Assembly today?.
Please Wait while comments are loading...