ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ದತ್ತಾ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ವಕ್ಫ್ ಮಂಡಳಿ ಆಸ್ತಿ ಕಬಳಿಕೆ ವಿವಾದ ವಿಧಾನಪರಿಷತ್ತಿನ ಕಲಾಪವನ್ನು ನುಂಗಿ ಹಾಕಿತ್ತು. ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಮಂಡಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಕಲಾಪದಲ್ಲಿ ಗದ್ದಲ ಹೆಚ್ಚಾದ ಕಾರಣ ಸೋಮವಾರಕ್ಕೆ ಕಲಾಪವನ್ನು ಮುಂದೂಡಲಾಯಿತು.

ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಅವರು ನೀಡಿರುವ ರೂಲಿಂಗ್‌ನಂತೆ ಸದನದಲ್ಲಿ ವರದಿ ಮಂಡಿಸಬೇಕೆಂದು ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದವು. [ಬಜೆಟ್ ಅಧಿವೇಶನ : ಬುಧವಾರದ ಕಲಾಪದ ಮುಖ್ಯಾಂಶಗಳು]

ಬಿಜೆಪಿಯ ಗೋ.ಮಧುಸೂದನ್ ಅವರು ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು. ಸಭಾನಾಯಕ ಎಸ್.ಆರ್. ಪಾಟೀಲ್ ಅವರು ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ತೆರಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸದನಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು. [ರಾಜಭವನ ತಲುಪಿದ ವಕ್ಫ್ ಮಂಡಳಿ ಆಸ್ತಿ ವಿವಾದ]

siddaramaiah

ಎಸ್.ಆರ್.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು, 'ವರದಿಯನ್ನು ಮಂಡಿಸಲು ಕಾನೂನು ಸಚಿವರೇ ಬರಬೇಕೇ?, ನಿಮಗೆ ವರದಿಯನ್ನು ಮಂಡಿಸಲು ಏನಾದರೂ ಕಾನೂನಿನ ಅಡ್ಡಿ ಇದೆಯೇ ಎಂದು ಪ್ರಶ್ನಿಸಿದರು. [ಎಸಿಬಿ ರಚನೆ : ಸರ್ಕಾರಕ್ಕೆ ಶೆಟ್ಟರ್ ಕೇಳಿದ ಪ್ರಶ್ನೆಗಳು]

ಸದನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಘಟಿಕೋತ್ಸವದಲ್ಲಿ ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವರು ಇರಲೇಬೇಕು. ಸದನಕ್ಕೆ ಗೈರುಹಾಜರಾಗಿ ಅಗೌರವ ತೋರಿಸಲು ಅಲ್ಲಿಗೆ ತೆರಳಿದ್ದಾರೆ ಎಂದು ಯಾರೂ ಭಾವಿಸುವ ಅಗತ್ಯವಿಲ್ಲ' ಎಂದು ಹೇಳಿದರು.

ಆದರೆ, ಬಿಜೆಪಿ ಸದಸ್ಯರು ತಮ್ಮ ಧರಣಿಯನ್ನು ವಾಪಸ್ ಪಡೆಯಲಿಲ್ಲ. ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಅವರು ಪದೇ-ಪದೇ ಮಾಡಿದ ಮನವಿಯೂ ಫಲ ಕೊಡಲಿಲ್ಲ. ಆಗ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು. ನಂತರ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರೆದಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ರಾಜೀನಾಮೆ ನೀಡಲು ಮುಂದಾದ ದತ್ತ : ಕಡೂರು ಕ್ಷೇತ್ರದ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತಾ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. ಕ್ಷೇತ್ರದ ವಿದ್ಯುತ್ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನಕೊಡದ ಧೋರಣೆಯಿಂದ ಮನನೊಂದು ಅವರು ರಾಜೀನಾಮೆಗೆ ಮುಂದಾದರು.

ವಿಧಾನಸಭೆಯಲ್ಲಿ ಮಾತನಾಡಿದ ದತ್ತಾ ಅವರು, 'ಕಡೂರು ಕ್ಷೇತ್ರದ ವ್ಯಾಪ್ತಿಯ ಮಂಚೇನಹಳ್ಳಿ ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿದೆ. ಹಿರಿಯೂರಿನಿಂದ ನಮಗೆ ಬರಬೇಕಾದಂತಹ ವಿದ್ಯುತ್‌ ಹೊಸದುರ್ಗಕ್ಕೆ ಹೋಗುತ್ತಿದೆ. ನನ್ನ ಪಕ್ಕದ ಕ್ಷೇತ್ರದ ಶಾಸಕರು ಕಾಂಗ್ರೆಸ್ ಪಕ್ಷದವರು. ನಾನು ಜೆಡಿಎಸ್ ಪಕ್ಷದವನು ತಮಗೆ ಕೆಟ್ಟ ಹೆಸರು ಬರಲಿ ಎಂದು ನಮ್ಮ ಭಾಗಕ್ಕೆ ಬರುವ ವಿದ್ಯುತ್‌ ಅನ್ನು ವರ್ಗಾಯಿಸಲಾಗುತ್ತಿದೆ' ಎಂದು ದೂರಿದರು.

'ಕ್ಷೇತ್ರದ ಜನರು ವಿದ್ಯುತ್ ಸಮಸ್ಯೆಯಿಂದ ಬೇಸತ್ತಿದ್ದಾರೆ. ನನ್ನನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದಾರೆ. ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದೇನೆ' ಎಂದು ದತ್ತ ಹೇಳಿದರು.

ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡುತ್ತಲೇ ದತ್ತಾ ಅವರು ತಾವು ತಂದಿದ್ದ ರಾಜೀನಾಮೆ ಪತ್ರವನ್ನು ಓದಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ರಾಜೀನಾಮೆ ಪತ್ರ ಓದುವುದಕ್ಕೆ ತಡೆಯೊಡ್ಡಿ ನಿಮ್ಮ ಸಮಸ್ಯೆ ಏನೆಂದು ಹೇಳಿ, ಸರ್ಕಾರದಿಂದ ಏನಾಗಬೇಕು. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ಹೇಗೆ ಎಂದು ಸಲಹೆ ನೀಡಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Budget session 2016 : Thursday March 24 highlights. What happened in the Assembly today?.
Please Wait while comments are loading...