ಮಂಗಳವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಮಾರ್ಚ್, 24 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಘೋಷಣೆ ಮಾಡಿದ ನಂತರ ಉಭಯ ಸದನಗಳ ವಿಧಾನಸಭೆ ಕಲಾಪ ಸುಗಮವಾಗಿ ನಡೆಯುತ್ತಿದೆ.
ಲೋಡ್ ಶೆಡ್ಡಿಂಗ್ ಅನಿವಾರ್ಯ : ರಾಜ್ಯದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವುಂಟಾದರೆ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಸೈಯದ್ ಮುದೀರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಪ್ರತಿದಿನ 10 ದಶಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಕೊರತೆ ಇದೆ ಎಂದರು.
ಸಕ್ಕರೆ ಕಾರ್ಖನೆ ಮುಟ್ಟುಗೋಲು : ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ದರವನ್ನು ನೀಡದಿರುವ ಹಾಗೂ ಬಾಕಿ ಉಳಿಸಿಕೊಂಡಿರುವ ಹಣ ಪಾವತಿ ಮಾಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ, ಅಗತ್ಯ ಬಿದ್ದರೆ ಅಂತಹ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಜನರಿಗೆ ಸಾಲಭಾಗ್ಯ ಕರುಣಿಸಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಹೆಚ್ಚು ಸಾಲ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದರು. ಆದರೆ, ಈಗ ಅವರು ಹೆಚ್ಚು ಸಾಲ ಮಾಡಿ ರಾಜ್ಯದ ಜನರಿಗೆ ಸಾಲದ ಭಾಗ್ಯವನ್ನು ಕರುಣಿಸಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಮಂಗಳವಾರ ವಿಧಾನಮಂಡಲದ ಕಲಾಪದಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸಂದರ್ಭದಲ್ಲಿ 45 ಸಾವಿರ ಕೋಟಿ ರೂಪಾಯಿ ಸಾಲ ಮಾಡಿತ್ತು, ಆದರೆ, ಸಿದ್ದರಾಮಯ್ಯ ಸರ್ಕಾರ ಎರಡು ವರ್ಷಗಳಲ್ಲಿ 42 ಸಾವಿರ ಕೋಟಿ ಸಾಲ ಮಾಡಿದೆ ಎಂದು ಹೇಳಿದರು.
ಲಾಟರಿ ಆರಂಭವಿಲ್ಲ : ರಾಜ್ಯದಲ್ಲಿ ಮತ್ತೆ ಲಾಟರಿಯನ್ನು ಆರಂಭಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. [ಡಿಕೆ ರವಿ ಪ್ರಕರಣ, ಸಿಎಂ ಕೊಟ್ಟ ಉತ್ತರವೇನು?]

ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ಯೋಜನಾ ಆಯೋಗದಿಂದಲೂ ಲಾಟರಿ ಪುನಃ ಆರಂಭಿಸುವ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ. 2007ರಲ್ಲೇ ಲಾಟರಿ ಮುಕ್ತ ರಾಜ್ಯ ಎಂದು ಘೋಷಣೆಯಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ. [ರಾಜ್ಯದ ಜನರಿಗೆ ಲಾಟರಿ ಭಾಗ್ಯ]
ಆಸ್ತಿ ನಿರ್ವಹಣೆ ಸರಿ ಇಲ್ಲ : ಹೊರ ರಾಜ್ಯಗಳಲ್ಲಿರುವ ಧರ್ಮಕ್ಷೇತ್ರಗಳ ಆಸ್ತಿ ನಿರ್ವಹಣೆ ಸರಿ ಇಲ್ಲ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಹೊರರಾಜ್ಯದ ಧರ್ಮಕ್ಷೇತ್ರಗಳಲ್ಲಿ ಕರ್ನಾಟಕದ ಛತ್ರಗಳ ಹಾಗೂ ಆಸ್ತಿಗಳ ನಿರ್ವಹಣೆ ಬಗ್ಗೆ ಶಾಸಕ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಹಲವು ಶಾಸಕರು ಈ ಬಗ್ಗೆ ದೂರು ನೀಡಿದ್ದಾರೆ. ನಿರ್ವಹಣೆಗೆ ವಿಶೇಷ ಗಮನ ಹರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.











Click it and Unblock the Notifications