Karnataka Budget 2025: 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ; ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ
ಬೆಂಗಳೂರು, ಮಾರ್ಚ್ 07: ರಾಜ್ಯದ 2025-26ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 16ನೇ ಬಜೆಟ್ ಇದಾಗಿದ್ದು, ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿನ ಮೂರನೇ ಬಜೆಟ್ ಇದಾಗಿದ್ದು, ಈ ಸಲದ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ವಿಸ್ತರಿಸಲು ಉದ್ದೇಶಿಸಿದೆ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2025-26ನೇ ಸಾಲಿನಲ್ಲಿಯೂ ಮುಂದುವರೆಸಲಾಗುವುದು.

ಶಾಲಾ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಾರದ ಐದು ದಿನಗಳಿಗೆ ವಿಸ್ತರಿಸಲಾಗುವುದು. ಒಟ್ಟಾರೆ 100 ಕೋಟಿ ರೂ. ವೆಚ್ಚದ ಈ ಯೋಜನೆಯ ಶೇ.25 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನವನ್ನು ತಲಾ 2,000 ರೂ. ಹೆಚ್ಚಿಸಲಾಗುವುದು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ತಲಾ 1,000 ರೂ. ಹೆಚ್ಚಿಸಲಾಗುವುದು.ರಾಜ್ಯದ ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. LKG ಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು, ಆಯಾ ತರಗತಿಗೆ ತಕ್ಕಂತೆ ಕಲಿಕೆಯ ಮಟ್ಟವನ್ನು ಹೊಂದುವ ನಿಟ್ಟಿನಲ್ಲಿ ಮೂರು ವರ್ಷಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. ಈ ಮೂಲಕ SSLC ಮತ್ತು PUC ಪರೀಕ್ಷೆಗಳ ಫಲಿತಾಂಶದಲ್ಲಿ ಸುಧಾರಣೆ ತರಲಾಗುವುದು. ಇದಕ್ಕಾಗಿ, ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:
ʻನಿರಂತರʼ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು. ರಾಜ್ಯದ 2,710 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ 500 ಶಾಲೆಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು Skill at School ಕಾರ್ಯಕ್ರಮ ರೂಪಿಸಲಾಗಿದೆ. ಇದರಡಿ, ಆಯ್ದ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು. ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ೭೨೫ ಕೋಟಿ ರೂ. ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು 50 ಕೋಟಿ ರೂ. ನೀಡಲಾಗಿದೆ.
ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಕಾರ್ಯ ಮತ್ತು ಹೊಸ ಪಾತ್ರೆ ಪರಿಕರಗಳನ್ನು ಒದಗಿಸಲು 46 ಕೋಟಿ ರೂ. ವೆಚ್ಚ ಮಾಡಲಾಗುವುದು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ 2೦೦ ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications