Karnataka Budget 2025: ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಬಜೆಟ್ 2025-26 ಮಂಡನೆ ದಿನಾಂಕ ಘೋಷಣೆಯಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ ತಿಂಗಳಿನಲ್ಲಿ 16ನೇಯ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ. ಮಾರ್ಚ್ 3ರಂದು ಬಜೆಟ್ ಅಧಿವೇಶನ ಆರಂಭವಾಗಲಿದೆ.
ಸೋಮವಾರ ವಿಧಾನಸೌಧದಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಮಾರ್ಚ್ 7ರ ಶುಕ್ರವಾರ ಬಜೆಟ್ ಮಂಡಿಸಲಾಗುತ್ತದೆ ಎಂದು ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಹೇಳಿದರು. ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ಬ್ಯುಸಿಯಾಗಿದ್ದಾರೆ.

ಎರಡು ವಾರದ ಬಳಿಕ ಸೋಮವಾರ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘದ ಮುಖಂಡರ ಜೊತೆ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಸಿ, ರೈತ ಸಮುದಾಯದ ಕುಂದುಕೊರತೆ, ಬೇಡಿಕೆಗಳನ್ನು ಆಲಿಸಿದರು.
ಮಾರ್ಚ್ 7ಕ್ಕೆ ಬಜೆಟ್ ಮಂಡನೆ: ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮಾರ್ಚ್3ರಿಂದ 2025-26ನೇ ಸಾಲಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ" ಎಂದು ಹೇಳಿದರು.
"ಮಾರ್ಚ್ 7ರಂದು ಬಜೆಟ್ ಮಂಡನೆ ಮಾಡಲಿದ್ದೇನೆ" ಎಂದರು. ಈಗಾಗಲೇ ಫೆಬ್ರವರಿ 6 ರಿಂದ ನಿರಂತರವಾಗಿ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಬಜೆಟ್ ಮಂಡನೆ ತಯಾರಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2023ರ ಜುಲೈನಲ್ಲಿ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು. ಇದು ಅವರು ಮಂಡಿಸಿದ 14ನೇ ಬಜೆಟ್ ಆಗಿತ್ತು. ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಒಟ್ಟಾರೆ ದಾಖಲೆ ಪ್ರಮಾಣದ ಬಜೆಟ್ ಮಂಡಿಸಿದ ಕೀರ್ತಿಯನ್ನು ಈ ಮೂಲಕ ಅವರು ಪಡೆದಿದ್ದರು.
2024-25ರ ಬಜೆಟ್ ಅನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿ 15ನೇ ಬಜೆಟ್ ಮಂಡಿಸಿದ ಕೀರ್ತಿ ಪಡೆದರು. ಈಗ ಮಾರ್ಚ್ 7ರಂದು 2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ 16ನೇ ಬಾರಿ ಮತ್ತು ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.
ಕರ್ನಾಟಕದ 2025-26ನೇ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ. 5 ಗ್ಯಾರಂಟಿ ಯೋಜನೆಗಳ ಘೋಷಣೆ, ಅನುಷ್ಠಾನದ ಬಳಿಕ ಕರ್ನಾಟಕ ಸರ್ಕಾರ ಖಜಾನೆ ಭರ್ತಿ ಮಾಡಲು ಹರಸಾಹಸ ಪಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದ್ದರಿಂದ ಬಜೆಟ್‌ನಲ್ಲಿ ಹಣ ಹೊಂದಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರದ ಬಜೆಟ್ ಮೇಲೆ ಅಪಾರ ನಿರೀಕ್ಷೆಗಳಿಲ್ಲ. ಕಾರಣ ಗ್ಯಾರಂಟಿ ಯೋಜನೆಗಳು. ಸರ್ಕಾರ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಬದಲು ಈಗ ಇರುವ ಯೋಜನೆಗಳಿಗೆ ಅನುದಾನವನ್ನು ಹಂಚಿಕೆ ಮಾಡುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಚುನಾವಣೆಯೂ ಇಲ್ಲದ ಕಾರಣ ಜನಪ್ರಿಯ ಯೋಜನೆಗಳ ಮೊರೆ ಹೋಗದೆ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅಂದಾಜಿಸಲಾಗಿದೆ.











Click it and Unblock the Notifications