Karnataka Budget 2024: ರಾಜ್ಯದಲ್ಲಿ ಕೆಫೆ ಸಂಜೀವಿನಿ ಸ್ಥಾಪನೆ, ಏನಿದು..? ಯಾರಿಗೆ ಲಾಭ?
ಬೆಂಗಳೂರು, ಫೆಬ್ರವರಿ.16: ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ, ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಕ್ಯಾಂಟೀನ್‌ಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಕೆಫೆ ಸಂಜೀವಿನಿ ಘೋಷಣೆ ಮಾಡಿರುವುದಕ್ಕೆ ವೈದ್ಯಕೀಯ ಶಿಕ್ಷಣ ಜೀವನೋಪಾಯ ಹಾಗೂ ಕೌಶಲ್ಯಾಭಿವೃಧಿ ಮತ್ತು ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಫೆಬ್ರವರಿ.16 ರಂದು 3,71,383 ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ, ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಫೆ ಸಂಜೀವಿನಿ ಸ್ಥಾಪನೆಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 7.50 ಕೋಟಿ ರೂ. ವೆಚ್ಚ ಮಾಡಿ 50 ಕೆಫೆಗಳನ್ನು ಸ್ಥಾಪನೆ ಮಾಡಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ.
ಒಂದು ಲಕ್ಷ ಮಹಿಳೆಯರಿಗೆ ಸುವರ್ಣಾವಕಾಶ!
ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡಲಾಗುವುದು. 2500 ಕಾಫಿ ಕಿಯೋಕ್ಸ್‍ಗಳನ್ನ 25 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಿ ಇದರ ಸಂಪೂರ್ಣ ನಿರ್ವಹಣೆಯನ್ನು ಮಹಿಳೆಯರೇ ಮಾಡಲಿದ್ದಾರೆ ಎಂದಿದ್ದಾರೆ.
ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೈಗೆಟುಕುವದರದಲ್ಲಿ ರಾತ್ರಿ ತಂಗುವ ವ್ಯವಸ್ಥೆಯನ್ನು ಐದು ನಗರಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ವಸತಿ ವ್ಯವಸ್ಥೆಯನ್ನು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲಾಗುವುದು.

ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುತ್ತಿರುವ ಕೋರ್ಸ್‍ಗಳಲ್ಲಿ ವಿಷಯಾಧಾರಿತ ಉದ್ಯಮಶೀಲತೆ ಅಭಿವೃದ್ಧಿ ತರಬೇತಿಯನ್ನು 25 ಸಾವಿರ ಯುವನಿಧಿ ಫಲಾನುಭವಿಗಳಿಗೆ ನೀಡಲಾಗುವುದು. ಯುವಜನರ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವುದರೊಂದಿಗೆ ಉದ್ಯೋಗ ಆಕಾಂಕ್ಷಿಗಳನ್ನು ಮತ್ತು ಉದ್ಯೋಗದಾತರನ್ನು ಒಂದೇ ವೇದಿಕೆಯಡಿ ತರಲು ಯುವ ಸಮೃದ್ಧಿ ಉದ್ಯೋಗ ಮೇಳವನ್ನು ರಾಜ್ಯದ ವಿವಿಧ ಭಾಗದಲ್ಲೂ ಆಯೋಜಿಸಲಾಗುತ್ತದೆ ಎಂದು ಸಿಎಂ ಘೋಷಿಸಿದ್ದಾರೆ.
ಕೈಗಾರಿಕೆ ಮತ್ತು ಉದಯೋನ್ಮುಖ ವಲಯಗಳಲ್ಲಿ ನುರಿತ ಉದ್ಯೋಗಿಗಳ ಅಗತ್ಯವನ್ನು ಪೂರೈಸಲು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ಕಿಲ್ ಅಕಾಡೆಮಿ ಸ್ಥಾಪನೆ, ಜಿಟಿಟಿಸಿ ಬಹು ಕೌಶಲ್ಯಅಭಿವೃದ್ಧಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕಲಬುರಗಿ, ಕೊಪ್ಪಳದ ತಳಕಲ್ ಮತ್ತುಮೈಸೂರಿನ ವರುಣಾದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಮೊದಲ ಹಂತದ ಯೋಜನೆಯನ್ನು ಮೂರು ವರ್ಷಗಳ ಅವಧಿಯಲ್ಲಿ ಅಂದಾಜು 120 ಕೋಟಿ ರೂ.ಅನುಷ್ಠಾನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಜಿಲ್ಲಾ ಖನಿಜ ನಿಧಿಯ ಮೂಲಕ ಗದಗ ಜಿಲ್ಲೆಯ ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ 150 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಪ್ರಾರಂಭ. ಎಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಷನ್, ಮೆಕ್ಯಾಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ , ಎಲೆಕ್ಟ್ರಾನಿಕ್ಸ್, ಎಂಜನಿಯರಿಂಗ್, ರೋಬೊಟೆಕ್ಸ್‍ಘಿ ಇತ್ಯಾದಿ ಹೆಚ್ಚುವರಿ ಡಿಪ್ಲೊಮಾ ಕೋರ್ಸ್‍ಗಳನ್ನು ಜಿಟಿಟಿಸಿ ಮಾದರಿಯಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಇದರಿಂದ 15 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು.
ಕಲಬುರಗಿಯ ಕೆಜಿಟಿಟಿಐನಲ್ಲಿ ಸಿಎನ್‍ಸಿ ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಜೇಷ್ಠತಾ ಕೇಂದ್ರವನ್ನು 16 ಕೋಟಿ ವೆಚ್ಚದಲ್ಲಿ ಸ್ಥಾಪನೆ, ಐಟಿಐ ಜಿಟಿಟಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆಂಗ್ಲ ಮತ್ತು ಸಂಹನ ತರಬೇತಿಗೆ 5 ಕೋಟಿ ನೀಡಲಾಗುವುದು. ಶ್ರೇಷ್ಠತೆ ಮತ್ತು ಉನ್ನತ ಸಾಧನೆಯನ್ನು ಗುರುತಿಸಲು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪ್ರತಿಕ್ಷಣಾರ್ಥಿಗಲನ್ನು ಕೌಶಲ್ಯ ಸ್ಪರ್ಧೆಗಳಿಗೆ ಸಿದ್ಧಪಡಿಸಲು ರಾಜ್ಯ ಕೌಶಲ್ಯ ಒಲಿಂಪಿಕ್ಸ್‍ನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಉದ್ಯೋಗ ಶೀಲತೆಯನ್ನು ಹೆಚ್ಚಿಸಲು ಡೂಯಲ್ ಸಿಸ್ಟಮ್ ಟ್ರೈನಿಂಗ್(ಡಿಎಸ್‍ಟಿ)ನ್ನು ರಾಜ್ಯದ ಎಲ್ಲಾ ಐಟಿಐಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯಮಗಳ ಸಹಭಾಗಿತ್ವದಲ್ಲಿ ಹಂತ ಹಂತವಾಗಿ ವಿಸ್ತರಿಸಲಾಗುವುದು. ಒಂದು ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳನ್ನು ಮೀನುಗಾರಿಕೆ, ಕುಟುಕ, ಕುರಿ, ಮೇಕೆ ಸಾಗಾಣಿಕೆ, ಜೇನು ಸಾಕಾಣಿಕೆ ಮತ್ತು ಕಿರು ಉದ್ಯಮ ಸ್ಥಾಪಿಸಲು 100 ಕೋಟಿ ವೆಚ್ಚ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications