ಚುನಾವಣಾ ಕಾಲೇ ಬಜೆಟ್ ನಿರೀಕ್ಷೆ ಏನೇನಿದೆ?
ಬೆಂಗಳೂರು, ಫೆ.13: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ರಾಜ್ಯ ಬಜೆಟ್ ಮಂಡನೆಯಾಗುತ್ತಿದೆ. ಫೆಬ್ರವರಿ 14ರ ಶುಕ್ರವಾರ ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು ಕೂಡಾ ಶುಕ್ರವಾರ(ಜು.12) ರಂದೇ ಎಂಬುದು ವಿಶೇಷ.
ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳನ್ನು ಮುಂದುವರೆಸುವುದು ಹಾಗೂ ಕೆಲವೊಂದು ಹೊಸ ಯೋಜನೆಗಳನ್ನು ಪ್ರಕಟಿಸಲು ಸರ್ಕಾರ ಯೋಜಿಸುತ್ತಿದೆ. ಪ್ರಸಕ್ತ ಸಾಲಿನ ಬಜೆಟ್ ಘೋಷಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಮಾರ್ಚ್ ಅಂತ್ಯದ ವೇಳೆಗೂ ಬಜೆಟ್ ಘೋಷಣೆಯಂತೆ ಕಾರ್ಯಕ್ರಮಗಳು, ಯೋಜನೆಗಳು ಅನುಷ್ಠಾನಗೊಳ್ಳಲಿವೆ. [ ಬಜೆಟ್ 2013-14 ಮುಖ್ಯಾಂಶಗಳು]
ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಜನಪರ ಬಜೆಟ್ ನೀಡಿದ ಹುಮ್ಮಸ್ಸಿನಲ್ಲಿರುವ ಸಿದ್ದರಾಮಯ್ಯ ಅವರು ಈ ಬಾರಿ ಕೂಡಾ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುತ್ತಿಲ್ಲ. ಅದರೂ ಕೃಷಿ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಉಳಿದಂತೆ ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ. ಸಿದ್ದರಾಮಯ್ಯ ಅವರ ಮತ್ತೊಂದು ಜನಸ್ನೇಹಿ ಬಜೆಟ್ ನಿಂದ ಏನೇನು ನಿರೀಕ್ಷಿಸಬಹುದು ಎಂಬುದನ್ನು ಮುಂದೆ ಓದಿ...ಬಜೆಟ್ ಲೈವ್ ಪುಟ

ಕರ್ನಾಟಕ ಬಜೆಟ್ 2014-15 ನಿರೀಕ್ಷೆಗಳು
ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಹೊಸ ತಾಲೂಕುಗಳ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಸರ್ಕಾರ ಈಗ ರಾಗ ಬದಲಾಯಿಸಿದೆ. ಹೊಸದಾಗಿ 43 ತಾಲೂಕುಗಳನ್ನು ರಾಜ್ಯದ ನಕ್ಷೆಗೆ ಸೇರಿಸಲು ಸಿದ್ಧರಾಗಿದ್ದರು. ಈಗ ಸುಮಾರು 50 ಹೊಸ ತಾಲೂಕುಗಳ ಘೋಷಣೆ ನಿರೀಕ್ಷೆಯಿದೆ.
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿ ನೀಡಿದ ವರದಿ ಶಿಫಾರಸಿನಂತೆ 43 ತಾಲೂಕುಗಳನ್ನು ರಚಿಸಲು ಚುನಾವಣೆ ಕಾಲದಲ್ಲೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಅಷ್ಟೇ ಸಂಖ್ಯೆಯ ತಾಲೂಕುಗಳ ಉದಯಕ್ಕೆ ನಾಂದಿ ಹಾಡುತ್ತಿದೆ

ರೈತರ ಬಡ್ಡಿ ರಹಿತ ಸಾಲ ಪ್ರಮಾಣ ಏರಿಕೆ
ರೈತರಿಗೆ ನೀಡುವ ಬಡ್ಡಿ ರಹಿತ ಬೆಳೆ ಸಾಲ ಮನ್ನಾ ಮಾಡುವಂತೆ ವಿಪಕ್ಷಗಳು ಬೇಡಿಕೆ ಇಡುತ್ತಾ ಬಂದಿವೆ. ಈ ನಡುವೆ ಬಡ್ಡಿ ರಹಿತ ಸಾಲ ಪ್ರಮಾಣವನ್ನು ಗರಿಷ್ಠ ಮೂರು ಲಕ್ಷ ರೂ.ಗೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಸಾಲ ಮನ್ನಾ ಬದಲು ಹೆಚ್ಚುವರಿ ಸಾಲ ನೀಡಿ ಸಾಲಗಾರರನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಮಠಗಳ ದೇಣಿಗೆಗೆ ಕೊಕ್ಕೆ
ಬಿಜೆಪಿ ಸರ್ಕಾರ ನಾಲ್ಕೂವರೆ ವರ್ಷಗಳಿಂದ ಮಠಗಳಿಗೆ, ಜಾತಿ ಅಧಾರಿತ ಸಂಸ್ಥೆಗಳಿಗೆ ನೀಡಿರುವ 'ದೇವರ ದುಡ್ಡು' ಕನಿಷ್ಠವೆಂದರೂ 500 ಕೋಟಿ ರು ದಾಟುತ್ತದೆ. ಇದರಲ್ಲಿ ಬಿಎಸ್ ಯಡಿಯೂರಪ್ಪ ಅವರೇ 300 ಕೋಟಿ ರು ನೀಡಿದ್ದು ವಿಶೇಷ.
ಆದರೆ, ಸಿದ್ದರಾಮಯ್ಯ ಅವರು ಯಾವ ಮಠವೂ ತಾನಾಗಿ ಬೇಡಿಕೆ ಸಲ್ಲಿಸದ ಹೊರತು ಜನರ ದುಡ್ಡು ದಾನ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಮಠಗಳಿಗೆ ನೀಡುವ ಹಣ ಉಳಿಯಲಿದೆ.
ಹೆಣ್ಣು ಮಕ್ಕಳಿಗೆ ವಿಶೇಷ ಕೊಡುಗೆಗಳು
ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಕೆಲವು ಮಾರ್ಪಾಡು ಆಗುವ ಸಾಧ್ಯತೆ ಇದೆ. 2ನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದರೆ ಹಾಗೂ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದರೆ ಅಂಥವರಿಗೂ ಯೋಜನೆ ಸೌಲಭ್ಯ ನೀಡಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ
* ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಜನರನ್ನು ವಂಚಿಸುವುದಿಲ್ಲ. ಕೃಷಿ, ನೀರಾವರಿ, ಇಂಧನ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ, ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
* ರೈತರಿಗೆ ನ್ಯಾಯಯುತ ಬೆಲೆ, ಬಿತ್ತನೆ ಬೀಜ, ಉತ್ತಮ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ

ಕರ್ನಾಟಕದಲ್ಲಿ ವ್ಯಾಟ್ ತೆರಿಗೆ ಅಧಿಕವಾಗಿದೆ
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವ್ಯಾಟ್ ತೆರಿಗೆ ಅಧಿಕವಾಗಿದೆ. ಶೇ 5.5 ರಿಂದ 5ಕ್ಕೆ ಹಾಗೂ 14.5ರಿಂದ 14ಕ್ಕೆ ಇಳಿಸುವಂತೆ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಆರ್ ಶಿವಕುಮಾರ್ ಕೋರಿದ್ದಾರೆ.
* ಇಂಧನ ಮೇಲಿನ ಸೆಸ್ ಇಳಿಕೆ ಮಾಡಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ದರ ಅಧಿಕ.* ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೋರಿಕೆ. ರಾಜ್ಯದ ಬೊಕ್ಕಸಕ್ಕೆ ಶೇ 70ರಷ್ಟು ಆದಾಯ ಬೆಂಗಳೂರು ಕೈಗಾರಿಕೆ ನೀಡುತ್ತಿದೆ.* ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಕೋಲಾರ, ತುಮಕೂರಿನಲ್ಲಿ ಪ್ರತ್ಯೇಕ ಕೈಗಾರಿಕಾ ಕಾರಿಡಾರ್ ಕೇಂದ್ರಕ್ಕೆ ಆಗ್ರಹ* ಬಿಡದಿಯಲ್ಲಿ ಪವರ್ ಹಾಗೂ ಯಲಹಂಕದಲ್ಲಿ ಡೀಸೆಲ್ ಪವರ್ ಯೋಜನೆ ಸ್ಥಾಪನೆಗೆ ಮನವಿ

ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ
ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ 'ಸಂಗಮ' ಕಾರ್ಯಕರ್ತ ಎ. ಪದ್ಮಶಾಲಿ ಮಾತನಾಡಿ, 'ಲೈಂಗಿಕ ಅಲ್ಪಸಂಖ್ಯಾತರು ಅಥವಾ LGBT ಸಮುದಾಯದ ಕಲ್ಯಾಣಕ್ಕಾಗಿ ಪ್ರತ್ಯೇಕ ಬೋರ್ಡ್ ನೇಮಿಸುವ ಅಗತ್ಯವಿದೆ.
ಈ ಹಿಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 75 ಲಕ್ಷ ಘೋಷಿಸಿದ್ದರು. ಆದರೆ, ನಯಾ ಪೈಸಾ ಕೂಡಾ ಯಾರಿಗೂ ಸಿಕ್ಕಿಲ್ಲ. ಶಾಶ್ವತ ಪರಿಹಾರ ಅಗತ್ಯವಿದೆ' ಎಂದಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನಗಣತಿ, ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಅರಿವು ಮೂಡಬೇಕಿದೆ. ನಮಗೆ ರಕ್ಷಣೆ ಇಲ್ಲದ್ದಂತಾಗಿದೆ. ನಮ್ಮ ಸಮುದಾಯಕ್ಕೆ ಸಿದ್ದರಾಮಯ್ಯ ಅವರು 20 ಕೋಟಿ ರು ಮೀಸಲಿಟ್ಟರೆ ಒಳ್ಳೆಯದು ಎಂದಿದ್ದಾರೆ.

ಬಿ ಪ್ಯಾಕ್ ಮೋಹನ್ ದಾಸ್ ಪೈ ನಿರೀಕ್ಷೆ
* 1000 ಕಿ.ಮೀ ಗಳ 8 ಲೇನ್ ಸೂಪರ್ ಹೈವೇ ನಿರ್ಮಾಣ. ಬೀದರ್ ನಿಂದ ಬೆಂಗಳೂರಿಗೆ ಸುವರ್ಣ ಕರ್ನಾಟಕ ಕಾರಿಡಾರ್
* 10 ವರ್ಷಗಳಲ್ಲಿ ಕೈಗಾರಿಕಾ ಕಾರಿಡರ್ ಸ್ಥಾಪಿಸಿ 50,00,000 ಉದ್ಯೋಗ ಸೃಷ್ಟಿಗೆ ಆದ್ಯತೆ.
* ಮುಂದಿನ 5 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಗುರಿ 25000 MW ಗೆ ಏರಿಕೆ
* ರೈತರಿಗೆ ಉತ್ತಮ ಬೀಜ ಪೂರೈಕೆ, ಮಾರುಕಟ್ಟೆ ಜತೆ ನಿರಂತರ ಸಂಪರ್ಕ











Click it and Unblock the Notifications