Breaking: ಸೆ.10ಕ್ಕೆ ಬಿಜೆಪಿ ಜನೋತ್ಸವ ಸಮಾವೇಶ ಮುಂದೂಡಿಕೆ
ಬೆಂಗಳೂರು, ಸೆಪ್ಟೆಂಬರ್ 7: ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಬಿಜೆಪಿ ಆಯೋಜಿಸಿದ್ದ ಜನೋತ್ಸವ ಸಮಾವೇಶವನ್ನು ಸೆಪ್ಟೆಂಬರ್ 10ರ ಶನಿವಾರಕ್ಕೆ ಮುಂದೂಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಗುರುವಾರ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನೋತ್ಸವ ಸಮಾವೇಶ ನಡೆಯಬೇಕಿತ್ತು. ಆದರೆ ರಾಜ್ಯದ ಹಿರಿಯ ನಾಯಕರನ್ನು ಕಳೆದುಕೊಂಡಿರುವ ಇಂಥ ಪರಿಸ್ಥಿತಿಯಲ್ಲಿ ಸಮಾವೇಶ ನಡೆಸದಿರಲು ಬಿಜೆಪಿ ನಿರ್ಧರಿಸಿದೆ.
"ಇಡೀ ರಾಜ್ಯ ಮುತ್ಸದ್ಧಿ ನಾಯಕರೊಬ್ಬರನ್ನು ಕಳೆದುಕೊಂಡ ಶೋಕದಲ್ಲಿರುವುದರಿಂದ ನಾಳಿನ 'ಜನ ಸ್ಪಂದನ (ಜನೋತ್ಸವ) - ಸಾರ್ಥಕ ಸೇವೆ ಹಾಗು ಸಬಲೀಕರಣ' ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 10ರ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಎರಡನೇ ಬಾರಿ ಮುಂದೂಡಿಕೆ ಆಗುತ್ತಿರುವ ಜನೋತ್ಸವ:
ಮಂಗಳವಾರ ರಾತ್ರಿ ಸಚಿವ ಉಮೇಶ್ ಕತ್ತಿ (61) ನಿಧನರಾದ ಹಿನ್ನಲೆ ಜನೋತ್ಸವ ಸಮಾವೇಶ ಮುಂದೂಡಿಕೆ ಮಾಡಲಾಗಿದೆ. ಈ ಸಮಾವೇಶಕ್ಕೆ ಸುಮಾರು 5-6 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ.
ಜುಲೈ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿತ್ತು. ಆದ್ದರಿಂದ 'ಜನೋತ್ಸವ' ಸಮಾವೇಶವನ್ನು ಜುಲೈ 28ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾದ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆಯಲ್ಲಿ ಬಸವರಾಜ ಬೊಮ್ಮಾಯಿ ಜನೋತ್ಸವ ಸಮಾವೇಶ ರದ್ದುಗೊಳಿಸಿದ್ದರು.












Click it and Unblock the Notifications