BJPvsBJP: ಬಿಜೆಪಿ ಶಾಸಕ- ಸಂಸದರ ಕಿತ್ತಾಟ: ಕಲಹ ನಿಬಾಯಿಸಲು ಪಕ್ಷಕ್ಕೆ ಅಧ್ಯಕ್ಷರಿಲ್ಲ, ಇರುವ ಅಧ್ಯಕ್ಷ ಅಡ್ರೆಸ್ಸಿಗಿಲ್ಲ
ಬೆಂಗಳೂರು, ಆಗಸ್ಟ್ 17: ಬಿಜೆಪಿ ಶಾಸಕ ಪ್ರಭು ಚೌಹಾಣ್ ಹಾಗೂ ಬಿಜೆಪಿ ಸಂಸದ ಭಗವಂತ ಖೂಬಾ ನಡುವಿನ ಕಲಹದ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿಯ ಆಂತರಿಕ ಕಲಹ ಈಗ ಆಂತರಿಕವಾಗಿಲ್ಲ, ಬೀದಿ ಜಗಳವಾಗಿ ಪರಿಣಮಿಸಿದೆ ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ.
ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರು ಬಿಜೆಪಿ ಸಂಸದರ ಮೇಲೆ ಕೊಲೆ ಷಡ್ಯಂತ್ರದ ಆರೋಪ ಹೋರಿಸಿದ ನಂತರ ಭಗವಂತ ಖೂಬಾ ಅವರು, 'ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ' ಎಂದು ಅಂಟಿಸಿಪೇಟರಿ ಬೇಲ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದರ ಅರ್ಥ ಚೌಹಾಣ್ ಅವರು ಮುಂದೆ ಅಹಿತಕರ ಘಟನೆಯನ್ನು ಎದುರಿಸಬೇಕಾಗುತ್ತದೆ ಎಂಬ ಸುಳಿವು ನೀಡಿದ್ದಾರೆಯೇ? ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಶಾಸಕರ ಆರೋಪದ ಬಗೆಗಿನ ತನಿಖೆಗೆ ರಾಜ್ಯದ ಪೋಲೀಸರ ಬದಲು ಸಿಬಿಐ ತನಿಖೆಗೆ ಆಗ್ರಹಿಸಿಲ್ಲವೇಕೆ ಸಂಸದರ ಷಡ್ಯಂತ್ರದ ಬಗ್ಗೆ ಮೋದಿಗೆ ದೂರು ಕೊಡಲಿಲ್ಲವೇಕೆ? ತಮ್ಮ ಶಾಸಕರಿಗೆ ಜೀವ ಬೆದರಿಕೆ ಇದ್ದರೂ ಬಿಜೆಪಿ ಮೌನ ವಹಿಸಿರುವುದೇಕೆ? ಎಂದು ಕೆಪಿಸಿಸಿ ಪ್ರಶ್ನಿಸಿದೆ.

'ಬಿಜೆಪಿಯ ಶಾಸಕ ಹಾಗೂ ಸಂಸದರ ನಡುವೆ ಕಿತ್ತಾಟ ತಾರಕಕ್ಕೇರಿದೆ. ಕಲಹ ನಿಬಾಯಿಸಲು ಪಕ್ಷಕ್ಕೆ ಅಧ್ಯಕ್ಷರಿಲ್ಲ, ಇರುವ ಅಧ್ಯಕ್ಷ ಅಡ್ರೆಸ್ಸಿಗಿಲ್ಲ! ಹೈಕಮಾಂಡ್ ರಾಜ್ಯ ಬಿಜೆಪಿಯತ್ತ ತಿರುಗಿಯೂ ನೋಡ್ತಿಲ್ಲ. ಬಿಜೆಪಿ ಈಗ ಡ್ರೈವರ್ ಇಲ್ಲದ ಬಸ್ಸಿನಂತೆ ಅಡ್ಡಾದಿಡ್ಡಿ ಓಡುತ್ತಿದೆ, ಪ್ರಪಾತಕ್ಕೆ ಮಗುಚಿ ಬೀಳುವುದು ನಿಶ್ಚಿತ ಎಂದೂ ಕಾಂಗ್ರೆಸ್ ಟೀಕಿಸಿದೆ.
ಬೀದರ್ ಜಿಲ್ಲೆಯ ಔರಾದ್‌ನ ಇಬ್ಬರು ಬಿಜೆಪಿ ನಾಯಕರ ನಡುವಿನ ಕಲವು ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನಾಲ್ಕು ಬಾರಿ ಶಾಸಕರಾಗಿರುವ, ಮಾಜಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಪ್ರಭು ಚೌಹಾಣ್ ಹಾಗೂ ಕೇಂದ್ರ ಸಚಿವರಾಗಿರುವ ಬೀದರ್ ಸಂಸದ ಭಗವಂತ್ ಖೂಬಾ ನಡುವೆ ಕಲಹ ಏರ್ಪಟ್ಟಿದೆ.
ಸಾರ್ವಜನಿಕ ಸಭೆಯೊಂದರಲ್ಲಿ ಪ್ರಭು ಚೌಹಾಣ್ ಅವರು ಖೂಬಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಖೂಬಾ ಅವರು ತಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಹತ್ತಿರವಾಗಿರುವ ಜನರನ್ನು ನನ್ನ ಹಿಂದೆ ಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಬೀದರ್ ಎಸ್‌ಪಿ ಅವರಿಗೆ ಪತ್ರ ಬರೆದಿರುವ ಸಂಸದ ಭಗವಂತ ಖೂಬಾ ಅವರು ಪ್ರಭು ಚೌಹಾಣ್ ಅವರು ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು. ನನಗೆ ಅವರ ಮೇಲೆ ಯಾವುದೇ ದ್ವೇಷ ಹಾಗೂ ಅಸೂಹೆಗಳಿಲ್ಲ. ಚೌಹಾಣ್ ಅವರ ಆರೋಪಗಳ ಕುರಿತು ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ, ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಆ ಬಳಿಕ ಕೇಸರಿ ಪಾಳಯದಲ್ಲಿ ಬಂಡಾಯ ಹಾಗೂ ಆಂತರಿಕ ಸಂಘರ್ಷಗಳು ಕಾಣಿಸಿಕೊಳ್ಳುತ್ತಲೇ ಇವೆ. ಈ ವರೆಗೆ ವಿರೋಧ ಪಕ್ಷದ ನಾಯಕರನ್ನು ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡದಿರುವ ಬಿಜೆಪಿ ಒಳಕಲಹಗಳಿಂದ ನಲುಗುತ್ತಿದೆ.












Click it and Unblock the Notifications