Karnataka: ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾದರಿ ಅನುಕರಣೆ, ಬಿಎಸ್‌ವೈ ಕಡೆಗಣನೆಗೆ ಬೆಲೆ ತೆತ್ತ ಬಿಜೆಪಿ
ಬೆಂಗಳೂರು, ಮೇ 14: ಕರ್ನಾಟಕ ಬಿಜೆಪಿಗೆ ಕಳೆದ 48 ಗಂಟೆಯಿಂದ ಹಿಂದೆ ಇದ್ದ ಉತ್ಸಾಹ, ಹುರುಪು ಇದೀಗ ಕುಂದಿದೆ. ಕಾರಣ ರಾಜ್ಯದ ಅಧಿಕಾರವನ್ನು ಮತದಾರರು ಕಾಂಗ್ರೆಸ್ 'ಕೈ'ಗೆ ವಹಿಸಿದ್ದಾರೆ. ಬಿಜೆಪಿಗೆ ಈ ರೀತಿಯ ಫಲಿತಾಂಶ ಧಕ್ಕಲು ಸ್ವತಃ ಅವರೇ ಕಾರಣ ಎಂಬ ವಿಶ್ಲೇಷಣೆಗಳು ಹೊರ ಬೀಳುತ್ತಿವೆ. ಈ ಪೈಕಿ ಕರ್ನಾಟಕದಲ್ಲಿ ಗುಜರಾತ್ ಮಾದರಿ ಪ್ರಯೋಗ, ಬಿಎಸ್ ಯಡಿಯೂರಪ್ಪರನ್ನು ಸೈಡ್‌ಲೈನ್ ಮಾಡಿದ್ದು ಸಹ ಬಿಜೆಪಿ ಸೋಲಿಗೆ ಕಾರಣ ಎನ್ನಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕಾಂಗ್ರೆಸ್ 135, ಬಿಜೆಪಿಗೆ 66 ಮತ್ತು ಜೆಡಿಎಸ್‌ಗೆ 19 ಮತ್ತಿತರೆ ಪಕ್ಷಗಳಿಗೆ 04 ಸ್ಥಾನ ಸಿಕ್ಕಿವೆ. ಆಡಳಿತ ಪಕ್ಷವಾದ ಬಿಜೆಪಿಯು ಟಿಕೆಟ್ ನೀಡುವ ವಿಚಾರದಲ್ಲಿ ಗುಜರಾತ್ ಮಾದರಿ ಅನುಸರಿಸಿತ್ತು. ಈ ಕಾರಣದಿಂದಲೇ ಬಿಜೆಪಿ ಈ ಬಾರಿ ಕೈ ಸುಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ.

ಗುಜರಾತ್ ಮಾದರಿ ಎಂದರೆ ಏನು?, ಹಿರಿಯ ಹಾಲಿ ಶಾಸಕರಿಗೆ ಟಿಕೆಟ್ ಕೈಬಿಟ್ಟು, ಹೊಸಬರಿಗೆ ಟಿಕೆಟ್ ನೀಡುವುದು. ಅಲ್ಲದೇ 70 ವರ್ಷ ದಾಟಿದವರಿಗೂ ಮತ್ತೊಮ್ಮೆ ಅವಕಾಶ ನೀಡದಿರುವುದು. ಅವರ ಜಾಗದಲ್ಲಿ ಹೊಸಬರಿಗೆ ಅವಕಾಶ ನೀಡುವುದು. ಗುಜರಾತ್‌ನಲ್ಲಿ ಬಿಜೆಪಿ 104 ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 94 ಮಂದಿ ಹೊಸಬರೆ ಗೆದ್ದಿದ್ದರು. ಅಲ್ಲಿ ಈ ಹೊಸ ಪ್ರಯೋಗ ಅಂದುಕೊಂಡಂತೆ ಯಶಸ್ವಿಯಾಗಿತ್ತು.
ಆ ರಾಜ್ಯದಲ್ಲಿ ಹೊಸ ಪ್ರಯೋಗದಿಂದ ಒಟ್ಟು ಸುಮಾರು 40 ಮಂದಿ ಹಾಲಿ ಶಾಸಕರಿಗೆ ಕೋಕ್ ನೀಡಲಾಗಿತ್ತು. ಇದೇ ರೀತಿ ಉತ್ತರ ಪ್ರದೇಶದಲ್ಲೂ ಈ ನೂತನ ಪ್ರಯೋಗದಿಂದ ಬಿಜೆಪಿ ಗೆಲುವು ಕಂಡಿತ್ತು. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗರಿಗೆ ಈ ಹೊಸ ವಿಧಾನ ಕೈ ಕೊಟ್ಟಿದೆ.

75 ಹೊಸಬರಲ್ಲಿ 13ಅಭ್ಯರ್ಥಿಗಳಿಗಷ್ಟೇ ಗೆಲುವು
ಕರ್ನಾಟಕದಲ್ಲಿ ಸಹ 75 ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿ ಟಿಕೆಟ್ ನೀಡಿತ್ತು. ಆ ಪೈಕಿ ಕೇವಲ 13 ಮಂದಿ ಮಾತ್ರವೇ ಈ ಚುನಾವಣೆಯಲ್ಲಿ ಗೆದಿದ್ದಾರೆ. ಉಳಿದೆಲ್ಲರು ಸೋಲನುಭವಿಸಿದ್ದಾರೆ. ಈ ಸಂಬಂಧ ಹಿರಿಯರಾದ ಕೆ.ಎಸ್.ಈಶ್ವರಪ್ಪ, ಎಸ್.ರಾಮದಾಸ್, ಎಸ್.ಅಂಗಾರ ಸೇರಿ ಕೆಲವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಈ ಹೊಸ ಪ್ರಯೋಗ ಸಹಿಸದ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. ಆದರೆ ಅವರು ಅಲ್ಲಿ ಸಹ ಸೋಲು ಕಂಡಿದ್ದಾರೆ.
ಬಿಜೆಪಿ ಈ ಹೊಸ ಪ್ರಯೋಗದ ಮೂಲಕ ಬೂತ್ ಮಟ್ಟದಲ್ಲಿ, ಜಿಲ್ಲಾ ಮತ್ತು ತಾಲೂಕು ಘಟಕದಲ್ಲಿ ಕಾರ್ಯಕರ್ತರ ಆದಿಯಾಗಿ ಕೆಳಹಂತದಿಂದ ಹೊಸಬರಿಗೆ ಟಿಕೆಟ್ ನೀಡಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಅಭ್ಯರ್ಥಿಗಳ ಹಿನ್ನೆಲೆ, ನಾಯಕತ್ವ ಗುಣ, ವರ್ಚಸ್ಸು ಎಲ್ಲವನ್ನು ಪರಿಶೀಲಿಸಿ ಅಳೆದು ತೂಗಿ 75 ಮಂದಿಗೆ ಟಿಕೆಟ್ ನೀಡಿತ್ತು. ಮೊದಲು ತಾವು ಆಯ್ಕೆ ಮಾಡಿದ ಮೂವರ ಪೈಕಿ ಒಬ್ಬರನ್ನು ಆಯ್ಕೆ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸಮಿತಿ ಕಳುಹಿಸಿತ್ತು. ಹೈಕಮಾಂಡ್ ತೀರ್ಮಾನಿಸಿದವರಿಗೆ ಈ ಬಾರಿ ಟಿಕೆಟ್ ಲಭಿಸಿತ್ತು.
ಕರ್ನಾಟಕದಲ್ಲಿ ಯಡಿಯೂರಪ್ಪನವರ ಕಡೆಗಣನೆ
ಗುಜರಾತ್‌ನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಅಮಿತ್ ಶಾ ಸೇರಿದಂತೆ ಇನ್ನಿತರ ಹೈಕಮಾಂಡ್ ನಾಯಕರೇ ಫೈನಲ್. ಅಲ್ಲಿ ಸ್ಥಳೀಯ ಮುಖಂಡರನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ನಡೆಯುತ್ತದೆ ಎಂಬ ವಾತಾವರಣ ಬಹುಕಾಲದಿಂದಲೂ ಇದೆ. ಆದರೆ ಕರ್ನಾಟಕದಲ್ಲಿ ಇದರ ವಿರುದ್ಧದ ಸ್ಥಿತಿ ಇದೆ.
ಕರ್ನಾಟಕದ ಮಟ್ಟಿಗೆ ಊರೂರು ಸುತ್ತಿ ಪಕ್ಷ ಸಂಘಟಿಸಿದ ಲಿಂಗಾಯತ ಸಮುದಾಯ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪರನ್ನು ಕಡೆಗಣಿಸುವಂತಿಲ್ಲ. ಲಿಂಗಾಯತರ ವಿಚಾರದಲ್ಲಿ ಅವರೇ ಹೈಕಮಾಂಡ್ ಇದ್ದಂತೆ. ಇದೆಲ್ಲ ಗೊತ್ತಿದ್ದರು ಸಹ ಅವರನ್ನು ಕಡೆಗಣಿಸಿದ್ದ ಕೇಂದ್ರ ನಾಯಕರಾದ ಬಿ.ಎಲ್ ಸಂತೋಷ್, ಅಮಿತ್ ಶಾ ಅವರೇ ಟಿಕೆಟ್ ಹಂಚಿಕೆಯನ್ನು ಅಂತಿಮಗೊಳಿಸಿದರು. ಬೃಹತ್ ಕಾರ್ಯಕ್ರಮಗಳಲ್ಲೂ ಸಹ ಬಿ.ಎಸ್.ಯಡಿಯೂರಪ್ಪರನ್ನಾಗಲಿ, ಸಿಎಂ ಬೊಮ್ಮಾಯಿಯವರನ್ನು ಕೇಂದ್ರಬಿಂದುವನ್ನಾಗಿಸುವ ಕೆಲಸ ಬಿಜೆಪಿ ಹೈಕಮಾಂಡ್ ಮಾಡಲೇ ಇಲ್ಲ. ಇದು ಸಹ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಬಿಜೆಪಿಗೆ ಸೋಲಿಗೆ ಹೊಸ ಪ್ರಯೋಗದ ಜೊತೆ ಇತರೆ ಕಾರಣಗಳು
ಅಲ್ಲದೇ ಆರ್.ಅಶೋಕ್ ಮತ್ತು ವಿ.ಸೋಮಣ್ಣರನ್ನು ಎರಡು ಕಡೆ ಕಣಕ್ಕಿಳಿಸಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕನಕಪುರದಲ್ಲಿ ಆರ್. ಅಶೋಕ್ ಸೋತು ಸ್ವಕ್ಷೇತ್ರ ಪದ್ಮನಾಭನಗರದಲ್ಲಿ ವಿಜಯಪತಾಕೆ ಹಾರಿಸಿದರು. ವಿ.ಸೋಮಣ್ಣ ಎರಡು ಕ್ಷೇತ್ರದಲ್ಲಿ ಸೋತಿದ್ದಾರೆ. ನನಗೆ ಚಿನ್ನದಂತಹ ಕ್ಷೇತ್ರ (ಗೋವಿಂದರಾಜನಗರ) ಸಿಗದಂತೆ ಮಾಡಿ ನನ್ನನ್ನು ನಿರುದ್ಯೋಗಿ ಮಾಡಿದ್ದಾರೆ ಎಂದು ಸೋಮಣ್ಣ ಅಳಲು ತೋಡಿಕೊಂಡಿದ್ದಾರೆ.
ಕಾಂಗ್ರೆಸ್‌ಗೆ 40 ಪರ್ಸೆಂಟ್ ಭ್ರಷ್ಟಾಚಾರದ ಅಸ್ತ್ರ, ಬಿಜೆಪಿ ಆಡಳಿತದಲ್ಲಿನ ಅದಕ್ಷತೆ ಮತ್ತು ಲಿಂಗಾಯತರನ್ನು ಕಡೆಗಣಿಸಿದ್ದನ್ನು ಎತ್ತಿತೋರಿಸಿದ್ದು, ಪಿಎಸ್‌ಐ ನಂತಹ ಹಗರಣ ಅವರ ಕೈ ಹಿಡಿದಿವೆ. ಇನ್ನೂ ಚುನಾವಣೆ ಹೊತ್ತಲ್ಲಿ ರೋಡ್ ಶೋ ಗೆ ಬಂದ ಕೇಂದ್ರ ನಾಯಕರು ರಾಜ್ಯದಲ್ಲಿ ನೆರೆ, ಪ್ರವಾಸ ಸ್ಥಿತಿಯಲ್ಲಿ ನಿರ್ಲಕ್ಷ್ಯ ತೋರಿದ್ದು, ಕೇವಲ ದೆಹಲಿ ನಾಯಕರನ್ನಷ್ಟೇ ನೆಚ್ಚಿಕೊಂಡ ರಾಜ್ಯ ಬಿಜೆಪಿ ನಡೆಯಿಂದ ಪಕ್ಷ ಸೋಲು ಅನುಭವಿಸಿದೆ.












Click it and Unblock the Notifications