ಬಿಜೆಪಿ ಯಲ್ಲಿ ವಿಪಕ್ಷ ನಾಯಕನ ಆಯ್ಕೆ ಇಂದು ? ಅವರ ಬಿಟ್ಟು, ಇವರ ಬಿಟ್ಟು, ಮತ್ಯಾರಿಗೆ ಚಾನ್ಸ್?
ಬೆಂಗಳೂರು, ಜುಲೈ 04: ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿ ಜಂಟಿ ಅಧಿವೇಶನ ಉದ್ದೇಶಿಸಿ ಸೋಮವಾರ ರಾಜ್ಯ ಪಾಲರು ಭಾಷಣ ಮಾಡಿದ್ದಾರೆ. ಆದರೆ ಬಿಜೆಪಿ ವಿಪಕ್ಷ ನಾಯಕ ಯಾರು ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿದೆ.
ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಹಲವು ಆರೋಪ ಪ್ರತ್ಯಾರೋಪಗಳಲ್ಲಿ ಬಿಜೆಪಿ ರಾಜ್ಯ ನಾಯಕರು ನಡೆಸುತ್ತಿದ್ದು, ಇತ್ತ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದದೇ ಇರುವುದು ಬಿಜೆಪಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿದ್ದು, ಬಿಜೆಪಿ ವಿರುದ್ದ ಸರ್ಕಾರದ ಸಚಿವರು ವ್ಯಂಗ್ಯವಾಡುತ್ತಿದ್ದಾರೆ.

ಸುಳ್ಳು ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದು, ಸದನದಲ್ಲಿ ಸರ್ಕಾರವನ್ನ ಇಕ್ಕಟ್ಟಿನಲ್ಲಿ ಸಿಲುಕಿಸಬೇಕಾದ ಬಿಜೆಪಿಯೇ ಈಗ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇಂದು ಬಿಜೆಪಿಯಲ್ಲು ವಿರೋಧ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಯಾರಿಗೆ ವಿರೋಧ ಪಕ್ಷದ ನಾಯಕನ ಪಟ್ಟ ಸಿಗುತ್ತದೆ ಎಂಬುದು ಇನ್ನೂ ನಿಗೂಢವಾಗಿದೆ.
ಈಗಾಗಲೇ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲು ವೀಕ್ಷಕರನ್ನು ನೇಮಿಸಿದ್ದು, ರಾಜ್ಯಕ್ಕೆ ಕೇಂದ್ರೀಯ ವೀಕ್ಷಕರಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ನೇಮಿಸಿದ್ದಾರೆ. ಈ ಇಬ್ಬರು ನಾಯಕರು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಇಂದು (ಮಂಗಳವಾರ) ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ. ಬಳಿಕ ಅಧಿಕೃತವಾಗಿ ವಿರೋಧ ಪಕ್ಷ ನಾಯಕನ ಆಯ್ಕೆಯನ್ನ ಹೈಕಮಾಂಡ್ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಇನ್ನೂ ಜಾತಿ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಬಿಜೆಪಿ ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತರನ್ನ ಹಾಗೂ ರಾಜ್ಯಾಧ್ಯಕ್ಷ ಸ್ಥಾನವನ್ನ ಒಕ್ಕಲಿಗರಿಗೆ ನೀಡಬೇಕು ಎಂಬ ಲೆಕ್ಕಾಚಾರವಿದ್ದು, ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತ ಹಾಗೂ, ಲಿಂಗಾಯತೇತರ ನಾಯಕರನ್ನು ನೇಮಿಸಿದ್ರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ ಎನ್ನಲಾಗಿದೆ. ಇನ್ನೂ ಲಿಂಗಾಯತ ಸಮುದಾಯದ ನಾಯಕರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ರೇಸ್ನಲ್ಲಿದ್ದಾರೆ. ಅಲ್ಲದೇ ಪಕ್ಷದ ನಿಷ್ಠಾವಂತ ನಾಯಕ ಹಾಗೂ ಶಾಸಕ ಸುನಿಕ್ ಕುಮಾರ್ ಕೂಡ ವಿಪಕ್ಷ ನಾಯಕನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಈ ವಿಪಕ್ಷ ನಾಯಕನ ಪಟ್ಟವನ್ನ ಯಾರಿಗೆ ನೀಡುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.












Click it and Unblock the Notifications