ಮಿನಿಸ್ಟರ್ ಮಾತು: ಕರ್ನಾಟಕದಲ್ಲೂ ಹಿರಿಯರಿಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್?
ಧಾರವಾಡ, ಡಿಸೆಂಬರ್ 10: ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಅನುಸರಿಸಲಿದೆ ಅಂತಾ ಈಗಲೇ ಲೆಕ್ಕಾಚಾರ ಹಾಕುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಪಕ್ಷನಿಷ್ಠೆ, ಗೆಲುವು ಹಾಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧತೆಯೇ ಮುಖ್ಯ ಮಾನದಂಡವಾಗಲಿದೆ ಎಂದು ಹೇಳಿದರು. ಅದೇ ರೀತಿ ಆಡಳಿತ ವಿಚಾರದಲ್ಲಿ ಗುಜರಾತ್ ಮಾಡೆಲ್ ಅನುಸರಿಸುವುದು ಉತ್ತಮ ಎಂದರು.
ಕಳೆದ 8 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ನಾನು ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಸಂಗತಿಗಳು ಎಲ್ಲಿಯೇ ನಡೆದರು ಅದನ್ನು ತೆಗೆದುಕೊಳ್ಳಬೇಕು. ಕರ್ನಾಟಕದ ಆಡಳಿತದಲ್ಲೂ ಅಂತಹ ಮಾದರಿಯನ್ನು ಅನುಸರಿಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ರಾಜ್ಯದಲ್ಲೂ ಹಿರಿಯರಿಗೆ ಟಿಕೆಟ್ ಕೊಡಲ್ವಾ ಬಿಜೆಪಿ?
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಬಿಜೆಪಿಯು ಹೊಸ ಹುರುಪು ತುಂಬಿಕೊಂಡಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸುವುದಕ್ಕೆ ನಿರ್ಧರಿಸಲಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಒಂದು ವೇಳೆ ಹಾಗಾದಲ್ಲಿ ರಾಜ್ಯದಲ್ಲೂ ಹಿರಿಯ ನಾಯಕರಿಗೆ ಚುನಾವಣಾ ಟಿಕೆಟ್ ಕೈತಪ್ಪುವ ಅಪಾಯವಿದೆ. ಯುವ ನಾಯಕರಿಗೆ ಹೆಚ್ಚು ಹೆಚ್ಚು ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಐಐಟಿ ಉದ್ಘಾಟನೆ ಬಗ್ಗೆ ಸೂಚಿಸಿರುವ ಪ್ರಲ್ಹಾದ್ ಜೋಶಿ
ಧಾರವಾಡ ಐಐಟಿ ಕಟ್ಟಡ ಉದ್ಘಾಟನೆಗೆ ಜನವರಿ 1ಕ್ಕೆ ತಯಾರಿ ಮಾಡುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೂಚನೆ ನೀಡಿದರು. ಇದೇ ವೇಳೆ ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕಟ್ಟಡ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವೀಕ್ಷಿಸಿದರು. ಜನವರಿ 1 ರೊಳಗೆ ನೂತನ ಕಟ್ಟಡ ಕಾಮಗಾರಿ ಮುಗಿಸುವಂತೆ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಧಾರವಾಡದ ಐಐಟಿ ಉದ್ಘಾಟನೆಗೆ ಮೋದಿ
ಐಐಟಿ ನಿರ್ಮಾಣ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಧಾರವಾಡ ಐಐಟಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲು ಒಪ್ಪಿದ್ದಾರೆ ಎಂದರು. ಡಿಸೆಂಬರ್ ನಲ್ಲೇ ಉದ್ಘಾಟನೆಗೆ ಯೋಜಿಸಲಾಗಿತ್ತು, ಆದರೆ ಕಾಮಗಾರಿಯ ಕೆಲಸ ಮುಗಿಯದ ಕಾರಣ ಜನವರಿ 1ಕ್ಕೆ ಉದ್ಘಾಟನೆ ಮಾಡಲು ಚಿಂತಿಸಲಾಗಿದೆ. ಜನವರಿಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ತಯಾರು ಮಾಡುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದೇನೆ. ಮತ್ತೊಂದು ಬಾರಿ ಕಾಮಗಾರಿ ವೀಕ್ಷಿಸಿ ಉದ್ಘಾಟನೆ ದಿನಾಂಕ ಫೈನಲ್ ಮಾಡುವುದಾಗಿ ಪ್ರಲ್ಹಾದ್ ಜೋಶಿ ಹೇಳಿದರು.

ಒಂದೇ ತಿಂಗಳಿನಲ್ಲಿ ರಾಜ್ಯಕ್ಕೆ ನಾಲ್ಕು ಬಾರಿ ಪ್ರಧಾನಿ ವಿಸಿಟ್
ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿ ಎರಡು ಮೂರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರ ಭೇಟಿ ವೇಳೆ ಧಾರವಾಡ ಐಐಟಿಯನ್ನ ಜನವರಿಯಲ್ಲಿ ಉದ್ಘಾಟಿಸಲು ಯೋಜಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಸ್ಪಷ್ಟಪಡಿಸಿದರು.












Click it and Unblock the Notifications