Karnataka Bandh: ಮಾರ್ಚ್ 22ರ ಕರ್ನಾಟಕ ಬಂದ್ ಮುಂದೂಡುವ ಸಾಧ್ಯತೆ, ಕಾರಣ ಇಲ್ಲಿದೆ
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಕನ್ನಡಿಗ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಈ ಬಂದ್ ಘೋಷಣೆ ಮಾಡಿದ್ದು, ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಹಲವರಿಂದ ಆಕ್ಷೇಪವೂ ಕೇಳಿಬಂದಿದೆ. ಹಾಗಾಗಿ ಕರ್ನಾಟಕ ಬಂದ್ ಅನ್ನು ಮುಂದೂಡುವ ಸಾಧ್ಯತೆ ಇದೆ.
ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ ವಾಟಾಳ್ ನಾಗರಾಜ್ ಅವರು ಈಗಾಗಲೇ ಕರೆ ಕೊಟ್ಟಿದ್ದಾರೆ. ಇದಕ್ಕೆ ಭರದ ಸಿದ್ಧತೆಯೂ ನಡೆಯುತ್ತಿದೆ. ಆದರೆ ಇದೀಗ ಬಂದ್ ದಿನಾಂಕವನ್ನು ಮುಂದೂಡುವಂತೆ ಹಲವರಿಂದ ಒತ್ತಾಯ ಕೇಳಿಬಂದಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಆ ದಿನ ಕರ್ನಾಟಕ ಬಂದ್ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಲಿದ್ದು, ಈ ಹಿನ್ನೆಲೆ ಬಂದ್ ದಿನಾಂಕವನ್ನು ಮುಂದೂಡವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ.

ಹೌದು, ಇದೇ ಮಾರ್ಚ್ 21ರಿಂದ 10ನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಇದೇ ಹೊತ್ತಿನಲ್ಲಿ ಕರ್ನಾಟಕ ಬಂದ್ ಮಾಡಿದರೆ ವಿದ್ಯಾರ್ಥಿಗಳ ಪರೀಕ್ಷೆಗೆ ಭಾರಿ ಹೊಡೆತ ಬೀಳಲಿದೆ. ಹಾಗಾಗಿ ಸರ್ಕಾರ ಕೂಡ ಬಂದ್‌ಗೆ ಒಪ್ಪಿಗೆ ನೀಡುವುದಿಲ್ಲ. ಈ ಕಾರಣದಿಂದ ಕರ್ನಾಟಕ ಬಂದ್ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಇಂದಿನಿಂದ ಪಿಯು ಪರೀಕ್ಷೆಗಳು ಶುರುವಾಗಿವೆ. ಇದೇ ಮಾರ್ಚ್ 20ರಂದು ಈ ಪರೀಕ್ಷೆಗಳು ಕೊನೆಗೊಳ್ಳಲಿವೆ. ಇದಾದ ಬಳಿಕ ರಾಜ್ಯಾದ್ಯಂತ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಗಳು ಕೂಡ ನಡೆಯಲಿದ್ದು, ಈಗಾಗಲೇ ದಿನಾಂಕ ಕೂಡ ಫಿಕ್ಸ್ ಆಗಿದೆ.
ಈಗ ದಿಢೀರನೆ ಕರ್ನಾಟಕ ಬಂದ್ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಲಿದೆ. ವರ್ಷವಿಡೀ ಶ್ರಮ ಪಟ್ಟಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಬಂದ್ ನಿರಾಸೆ ಮಾಡಲಿದೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದಲೂ ಈ ಪರೀಕ್ಷೆ ಮಹತ್ವದ್ದಾಗಿದ್ದು, ಆ ದಿನ ಕರ್ನಾಟಕ ಬಂದ್ ನಡೆಸುವುದು ಬೇಡ ಎಂದು ಕೆಲ ಕನ್ನಡ ಸಂಘಟನೆಗಳೇ ಹೇಳುತ್ತಿವೆ ಎಂದು ತಿಳಿದುಬಂದಿದೆ.

ಮಾರ್ಚ್ 22ರಂದು ಬಂದ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಇಷ್ಟೆಲ್ಲ ಸಮಸ್ಯೆ ಆಗುವುದರಿಂದ ಇದನ್ನು ಮುಂದೂಡುವುದೇ ಒಳಿತು ಎಂದು ಪೋಷಕರು ಕೂಡ ಧ್ವನಿ ಎತ್ತಿದ್ದಾರೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಅಲ್ಲದೆ ಈ ಪರೀಕ್ಷೆಗಾಗಿ ಮಕ್ಕಳು ವರ್ಷವೆಲ್ಲ ಓದಿರುತ್ತಾರೆ. ಅಂದು ಬಂದ್ ಮಾಡಿದರೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೂಡ ಸಮಸ್ಯೆಯಾಗಲಿದೆ. ಒಂದು ದಿನದ ಬಂದ್‌ಗಾಗಿ ಇವರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಕನ್ನಡ ಸಂಘಟನೆಗಳಿಗೆ ಬೇಡಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಇಷ್ಟೆಲ್ಲ ತೊಂದರೆಯಾಗುವುದಾದರೆ ನಾವು ಬಂದ್ ಅನ್ನು ಬೇರೆ ದಿನ ಮಾಡೋಣ. ಇದನ್ನೂ ಮೀರಿ ಬಂದ್ ಮಾಡುವುದಾದರೆ ನಾವು ಬೆಂಬಲ ಕೊಡೋದಿಲ್ಲ. ವಿದ್ಯಾರ್ಥಿಗಳ ಪರೀಕ್ಷೆಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗಬಾರದು. ಅಗತ್ಯವಿದ್ದಲ್ಲಿ ಬಂದ್ ದಿನಾಂಕವನ್ನು ಈಗಲೇ ಬದಲಿಸಿ ಎಂದೂ ವಾಟಾಳ್ ನಾಗರಾಜ್ ಅವರಿಗೆ ಹೇಳಿದ್ದಾರೆ. ಈ ಹಿನ್ನೆಲೆ ಬಂದ್ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಬಂದ್ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications