ಕರ್ನಾಟಕ ಬಂದ್ : ಬಸ್ ಸಂಚಾರ, ಹೋಟೆಲ್, ಸ್ಕೂಲ್ ಓಪನ್ ಇರುತ್ತಾ?
ಬಯಲು ಸೀಮೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರು ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ.
ಬೆಂಗಳೂರು, ಜೂನ್ 11 : ಬಯಲು ಸೀಮೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರು ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ಬಂದ್ ದಿನ ಯಾವ ಸೇವೆ ಇರುತ್ತದೆ ಯಾವ ಸೇವೆ ಇರಲ್ಲ, ಬಸ್ ಸಂಚಾರ, ಶಾಲೆ-ಕಾಲೇಜು, ಕಚೇರಿ ಬಗ್ಗೆ ವಿವರ ಇಲ್ಲಿದೆ...
'ಕಾಂಗ್ರೆಸ್ ಸರ್ಕಾರ ಬಯಲು ಸೀಮೆ ಜಿಲ್ಲೆಗೆ ಏನು ಮಾಡಿದೆ? ಪ್ರಾಮಾಣಿಕ ಚಿಂತನೆ ಇಲ್ಲದ ಸರ್ಕಾರ ಇದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಯಲು ಸೀಮೆ ಜನರ ಕಷ್ಟ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಯಾವುದೇ ಸರ್ಕಾರಕ್ಕೂ ನಮ್ಮ ಕೂಗು ಕೇಳಿಸುತ್ತಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕೆಲಸ ಆಗುತ್ತಿಲ್ಲ. ಡ್ಯಾಂನಲ್ಲಿ ಹೂಳೆತ್ತಲು ರೈತರಿಗೆ ನಾವೇ ನೆರವಾಗಲಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಬಂದ್ ಗೆ ಯಾರೆಲ್ಲ ಬೆಂಬಲ ನೀಡಿದ್ದಾರೆ? ಅಗತ್ಯ ವಸ್ತುಗಳ ಪೂರೈಕೆ ಅಲ್ಲದೆ, ಯಾವೆಲ್ಲ ಸೌಲಭ್ಯಗಳು ಲಭ್ಯವಿರಲಿದೆ? ಯಾವೆಲ್ಲ ಸೇವೆಗಳು ಸ್ಥಗಿತಗೊಳ್ಳಲಿದೆ? ಪ್ರತಿಭಟನೆ ಎಲ್ಲೆಲ್ಲಿ? ವಿವರಗಳಿಗಾಗಿ ಮುಂದೆ ಓದಿ...

ಬೆಂಬಲ ಯಾರು ನೀಡಿದ್ದಾರೆ?
'ನಮ್ಮ ಪರೋಕ್ಷ ಬೆಂಬಲ ಸಿಗಲಿದೆ' ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.
* ಬಂದ್ ಗೆ ಎಐಟಿಯುಸಿ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದೆ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲ ಸಿಗುವ ನಿರೀಕ್ಷೆಯಿದೆ. ಡಾ.ರಾಜ್ ಕುಮಾರ್ ಅಭಿಮಾನಗಳ ಸಂಘದ ಅಧ್ಯಕ್ಷ ಸಾರಾ ಗೋವಿಂದು ಅವರು ವಾಟಾಳ್ ಅವರಿಗೆ ಬೆಂಬಲ ನೀಡಿದ್ದಾರೆ.

ಬಂದ್ ದಿನ ಏನು ನಡೆಯಲಿದೆ?
ಸೋಮವಾರ ಬೆಳಗ್ಗೆ 11ಕ್ಕೆ ಪುರಭವನದಿಂದ ಬೃಹತ್ ಮೆರವಣಿಗೆ ಹೊರಟು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಉದ್ದೇಶವನ್ನು ಕನ್ನಡಪರ ಸಂಘಟನೆಗಳು ಹೊಂದಿವೆ. ಆದರೆ, ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದು, ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ, ಹೋರಾಟಗಾರರು ಹಡನ್ಸ್ ಸರ್ಕಲ್ ಕೂಡಾ ದಾಟಲು ಬಿಡುವುದಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬರುತ್ತಿರುವುದರಿಂದ ನಗರದ ಹಲವೆಡೆ ಬಿಗಿ ಭದ್ರತೆ ಇನ್ನಷ್ಟು ಹೆಚ್ಚಾಗಲಿದೆ. ಬದಲಿ ಮಾರ್ಗ, ಸಂಚಾರ ವ್ಯವಸ್ಥೆ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಟ್ವೀಟ್ಸ್ ನೋಡುತ್ತಿರಿ.

ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿ
ರಾಜ್ಯದಲ್ಲಿ ಕೆಎಸ್ ಆರ್‌ಟಿಸಿ ಹಾಗೂ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸೇವೆಗಳು ಎಂದಿನಂತೆ ಇರಲಿವೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಈಶಾನ್ಯ ಕರ್ನಾಟಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಬೆಂಬಲ ವ್ಯಕ್ತಪಡಿಸಿಲ್ಲ.

ನಮ್ಮ ಮೆಟ್ರೋ
ಮೆಟ್ರೊ ರೈಲು ನಿತ್ಯದಂತೆ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆ ನಡೆದಿರುವುದರಿಂದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ಸಾಧ್ಯವಿಲ್. ಅಗತ್ಯ ಬಿದ್ದರೆ ಹೆಚ್ಚುವರಿ ಸೇವೆ ಅಥವಾ ಕಡಿಮೆ ಸಮಯಕ್ಕೆ ರೈಲು ಓಡಿಸಲಾಗುವುದು ಎಂದು ಬಿಎಂ ಆರ್ ಸಿಎಲ್ ಹೇಳಿದೆ.

ಆಟೋರಿಕ್ಷಾ ಸಂಚಾರ
ಜೂನ್ 12ರಂದು ಆಟೋರಿಕ್ಷಾ ಸಂಚಾರ ಎಂದಿನಂತೆ ಇರಲಿದೆ ಎಂದು ಆದರ್ಶ ಆಟೋರಿಕ್ಷಾ ಮಾಲೀಕರ ಸಂಘ ಪ್ರಕಟಿಸಿದೆ. ಆಪ್ ಆಧಾರಿತ ಓಲಾ ಆಟೋರಿಕ್ಷಾಗಳು ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ಖಾಸಗಿ ಬಸ್ಸುಗಳು ಸಂಚಾರ
ಖಾಸಗಿ ಬಸ್ಸುಗಳ ಮಾಲೀಕರ ಸಂಘ ಬುಧವಾರದ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಆದ್ದರಿಂದ, ಖಾಸಗಿ ಬಸ್ಸುಗಳು ಸಂಚಾರ ನಡೆಸಲಿವೆ.

ನಂದಿನ ಹಾಲು, ಪೇಪರ್
ಅಗತ್ಯ ವಸ್ತುಗಳಾದ ಹಾಲು, ಔಷಧಗಳು ದೊರೆಯಲಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತೆರೆದಿರುತ್ತವೆ. ಆಂಬ್ಯುಲೆನ್ಸ್ ಸೇವೆ ಲಭ್ಯವಿರುತ್ತದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ಲಾರಿಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಬೆಳಗ್ಗೆದ್ದು ಎಂದಿನಂತೆ ಕಾಫಿ ಹೀರುತ್ತಾ ದಿನಪತ್ರಿಕೆ ಓದಬಹುದು.

ಖಾಸಗಿ ಶಾಲೆಗಳಿಗೆ ರಜೆ ಇಲ್ಲ
ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮಾ) ಜೂನ್ 12(ಸೋಮವಾರ) ರಂದು ಶಾಲೆಗಳಿಗೆ ರಜೆ ಘೋಷಿಸಿಲ್ಲ. ಬೆಂಗಳೂರು ನಗರದಲ್ಲಿ 700 ಮತ್ತು ರಾಜ್ಯಾದ್ಯಂತ 1,400 ಶಾಲೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.

ಸರ್ಕಾರಿ ಶಾಲೆಗಳು
ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಆದ್ದರಿಂದ, ಸೋಮವಾರ(ಜೂನ್ 12)ದಂದು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಎಂದಿನಮ್ತೆ ಸಿಗಲ್ದೆ. ಆಶಾ ಕಾರ್ಯಕರ್ತೆಯರು ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಮೇಲಾಗಿ, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಮ್ಯಾಕ್ಸಿ ಕ್ಯಾಬ್, ಓಲಾ, ಉಬರ್
ಆಪ್ ಆಧಾರಿತ ಆಟೋ, ಕ್ಯಾಬ್ ಗಳು ಸಹ ನಿತ್ಯದಂತೆ ಓಡಾಡಲಿವೆಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ. ನಾವು ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಸಂಘಟನೆಯ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

ಹೊಟೆಲ್ ಗಳು ಬಂದ್ ಆಗಲ್ಲ
ಹೋಟೆಲ್, ಮಾಲ್ ಗಳು ಕಾರ್ಯನಿರ್ವಹಿಸಲಿವೆ. ಸರ್ಕಾರಿ ಕಚೇರಿಗೆ ಬಂದವರಿಗೆ ಹೋಟೆಲ್‌ನಲ್ಲಿ ಊಟ ಸಿಗುತ್ತದೆ. ರಸ್ತೆ ಬದಿ ತಳ್ಳುಗಾಡಿ ಹೋಟೆಲ್ ಗಳಂತೂ ಬಂದ್ ಆಗುವುದಿಲ್ಲ. ಮಾಲ್ ಗಳ ಫುಡ್ ಕೋರ್ಟ್, ಆನ್ ಲೈನ್ ಫುಡ್ ಕೂಡಾ ಲಭ್ಯವಿರಲಿದೆ.

ಬ್ಯಾಂಕ್ ಓಪನ್ ಇರಲಿದೆ
ಎಸ್‌ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕ್ ಗಳ ವಾರದ ರಜೆ ದಿನಾಂಕ ಬದಲಾಗಿರುವುದ್ದರಿಂದ ಸೋಮವಾರ ಬ್ಯಾಂಕ್ ಓಪನ್ ಇರುತ್ತದೆ. ಭಾರತೀಯ ಜೀವ ವಿಮಾನಿಗಮ (ಎಲ್‌ಐಸಿ) ಕಚೇರಿಗಳು, ಅಂಚೆ ಕಚೇರಿ ಕಾರ್ಯ ನಿರ್ವಹಿಸಲಿದೆ.

ರೈಲು ಸಂಚಾರ ವ್ಯತ್ಯಯ ಇಲ್ಲ
ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ. ಜನರು ತುರ್ತು ಪ್ರಯಾಣಕ್ಕಾಗಿ ರೈಲು ಮತ್ತು ಖಾಸಗಿ ಬಸ್ಸುಗಳನ್ನು ಅವಲಂಬಿಸಬಹುದು.

ಕೋಲಾರ ಬಂದ್
ಕೋಲಾರ ಬಂದ್ ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ, ಕನ್ನಡಪರ, ದಲಿತರು, ಕಾರ್ಮಿಕರು ಮೊದಲಾದ ಸಂಘಟನೆಗಳು ಬೆಂಬಲ ನೀಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆ ಇದೆ.ಮುಂಜಾಗ್ರತೆ ಕ್ರಮವಾಗಿ ನಾಳೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.












Click it and Unblock the Notifications