Karnataka Bandh: ಮೆಜೆಸ್ಟಿಕ್, ಸ್ಯಾಟಲೈಟ್‌ನಲ್ಲಿ ಜನಸಂದಣಿ ಇಳಿಕೆ- ಮೈಸೂರಿನಲ್ಲಿ ಪ್ರತಿಭಟನಾಕಾರರು ಖಾಕಿ ವಶ
ಬೆಂಗಳೂರು ಮಾರ್ಚ್ 22: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಮರಾಠಿಗರ ಪುಂಡಾಟವನ್ನು ಖಂಡಿಸಿ ಇಂದು ಕರ್ನಾಟಕ ಬಂದ್‌ಗೆ ಕನ್ನಡಪರ ಹೋರಾಟಗಾರರು ಕರೆ ನೀಡಿದ್ದಾರೆ. ರಾಜ್ಯಾದಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೆಡೆ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದರೆ ಇನ್ನೂ ಕೆಲವೆಡೆ ಸಹಜಸ್ಥಿತಿ ಇರುವುದು ಕಂಡುಬಂದಿದೆ. ಹಾಗಾದರೆ ಬೆಂಗಳೂರಿನಲ್ಲಿ ಬಂದ್‌ಗೆ ರೆಸ್ಪಾನ್ಸ್ ಹೇಗಿದೆ ಎಂದು ತಿಳಿಯೋಣ.
ಕನ್ನಡಿಗರ ಮೇಲೆ ಮರಾಠಿ ಪುಂಡರ ಹಲ್ಲೆಯನ್ನು ಖಂಡಿಸಿ ಶನಿವಾರ ವಿವಿಧ ಸಂಘ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಜನ ಸಂದಣಿ ಕಡಿಮೆಯಾಗಿದೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚಾರ ಇದೆ. ಆದರೆ ನಿತ್ಯ ಕಂಡುಬರುವಷ್ಟು ಪ್ರಯಾಣಿಕರು ಕಂಡುಬರುತ್ತಿಲ್ಲ.

ಇನ್ನೂ ಬೆಂಗಳೂರಿನ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ವಾರಾಂತ್ಯವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿದ್ದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ಇನ್ನೂ ಬೆಂಗಳೂರಿನ ಟೌನ್‌ಹಾಲ್ ಬಳಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಬೇಕಾದ ತಯಾರಿ ಮಾಡಿಕೊಳ್ಳಲಾಗಿದ್ದು ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.
ಇನ್ನೂ ಗಡಿ ಭಾಗದಲ್ಲಿ ತಮಿಳುನಾಡಿನಿಂದ ಬರುವ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಜೊತೆಗೆ ಬೆಳಗಾವಿಯಲ್ಲಿ ಸ್ವಯಂ ಪ್ರೇರಣೆಯಿಂದ ಜನ ಮಾರುಕಟ್ಟೆ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಕೋಲಾರದಲ್ಲಿ ಎಂದಿನಂತೆ ಜನಜೀವನ ಕಂಡುಬಂದಿದ್ದು ರಾಯಚೂರಿನಲ್ಲಿ ಪ್ರತಿಷ್ಠಿತ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ.
ಕೊಪ್ಪಳ, ಬಳ್ಳಾರಿಯಲ್ಲಿ ಕನ್ನಡಪರ ಸಂಘಟನೆಗಳು ಮರಾಠಿಗರ ವಿರುದ್ಧ ಸಿಡಿದೆದ್ದಿವೆ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ದಾವಣಗೆರೆ, ಮಂಡ್ಯ, ಚಾಮರಾಜನಗರದಲ್ಲಿ ಮರಾಠಿ ಪುಂಡರ ಪ್ರಕೃತಿ ದಹನ ಮಾಡಿ ಆಕ್ರೋಶ ಹೊರಹಾಕಲಾಗಿದೆ.
ಮೈಸೂರಿನಲ್ಲಿ ಪ್ರತಿಭಟನಾಕಾರರು ಖಾಕಿ ವಶಕ್ಕೆ
ಮೈಸೂರಿನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಬೀದಿಗಿಳಿದು ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಣ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ.












Click it and Unblock the Notifications