Karnataka Bandh: ವಿಮಾನದ ಟಿಕೆಟ್ ಪಡೆದು ಏರ್ಪೋರ್ಟ್ ಒಳಗೆ ಹೋಗಿ ಪ್ರತಿಭಟನೆ ಮಾಡುತ್ತಿದ್ದವರ ಬಂಧನ!
ಬೆಂಗಳೂರು, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಪ್ರತಿಭಟನೆ ನಡೆಸಲು ಬಂದಿದ್ದ, ಕರ್ನಾಟಕ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐವರು ಕನ್ನಡ ಪರ ಹೋರಾಟಗಾರರು ವಿಮಾನ ನಿಲ್ದಾಣದ ಒಳಗಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಐದು ಜನ ಕಾರ್ಯಕರ್ತರು 09:50 ರ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದರು. ನಂತರ ವಿಮಾನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ ಸೇನೆಯ ಐದು ಜನ ಕಾರ್ಯಕರ್ತರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟಿಸಲು ಮುಂದಾಗಿದ್ದರು. ಟರ್ಮಿನಲ್‌ನಿಂದ ವಿಮಾನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದರೆ, ಪೊಲೀಸರ ಗಮನಕ್ಕೆ ಬಂದ ತಕ್ಷಣ ಅವರನ್ನು ವಶಪಡಿಸಿಕೊಂಡಿದ್ದಾರೆ.
ಕಾವೇರಿ ಕೂಗಿನ ಹಿನ್ನೆಲೆ ರಾಜ್ಯ ಸರ್ಕಾರದ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದ್ದು, ಕರ್ನಾಟಕ ಬಂದ್ ನಿಂದಾಗಿ ವಿಮಾನ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇನ್ನೂ ಮೊನ್ನೆಯಷ್ಟೇ ಕಾವೇರಿ ನೀರಿಗಾಗಿಯೇ ಬೆಂಗಳೂರು ಬಂದ್ ಮಾಡಲಾಗಿತ್ತು. ಶುಕ್ರವಾರ ನೂರಾರು ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದು, ಆಟೋ, ಕ್ಯಾಬ್, ಓಲಾ, ಊಬರ್ ಟ್ಯಾಕ್ಸಿ ಸಂಚಾರ ಇಲ್ಲದಂತಾಗಿದೆ. ಬಂದ್‌ಗೆ ಕರೆ ಕೊಟ್ಟಿದ್ದರಿಂದ ಶುಕ್ರವಾರ ವಿಮಾನ ಟಿಕೆಟ್ ಬುಕ್ ಮಾಡಿಲ್ಲ. ಕೆಲವರು ಬುಕ್ ಮಾಡಿದ್ದರೂ ವಿಮಾನ ನಿಲ್ದಾಣಕ್ಕೆ ಹೋಗಲು ವಾಹನಗಳು ಇಲ್ಲದ್ದರಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ದಿಲ್ಲಿ, ಮುಂಬೈ, ಕೊಲ್ಕತ್ತಾ ಮಂಗಳೂರು ಸೇರಿ ವಿವಿಧೆಡೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ಹೋಗಬೇಕಿದ್ದ 44 ವಿಮಾನಗಳ ಹಾರಾಟ ಸ್ಥಗಿತಗೊಂಡಿವೆ.












Click it and Unblock the Notifications