ರಾಜಕೀಯ ಹೈಡ್ರಾಮ, ಶುಕ್ರವಾರದಿಂದ ಮುಂಗಾರು ಅಧಿವೇಶನ
Recommended Video
ಬೆಂಗಳೂರು, ಜುಲೈ 11 : ಕರ್ನಾಟಕದ ರಾಜಕೀಯ ಹೈಡ್ರಾಮಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ಚಾಲನೆ ಸಿಗಲಿದೆ. ಮೊದಲ ದಿನದ ಅಧಿವೇಶನ ಕುತೂಹಲಕ್ಕೆ ಕಾರಣವಾಗಿದೆ.
16 ಶಾಸಕರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ಬಹುಮತ ಕಳೆದುಕೊಂಡಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಶುಕ್ರವಾರ ವಿಶ್ವಾಸ ಮತಯಾಚನೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.
ಜುಲೈ 12 ರಿಂದ 21ರ ತನಕ ಮುಂಗಾರು ಅಧಿವೇಶನ ನಡೆಯಲಿದೆ. ಅಧಿವೇಶನದ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಹಾಕಲಾಗಿದೆ. ಬುಧವಾರದ ಗಲಾಟೆ ಬಳಿಕ ವಿಧಾನಸೌಧದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಿದೆ. ಶುಕ್ರವಾರದ ಕಲಾಪದ ವೇಳೆ ಬಹುಮತ ಸಾಬೀತು ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ನಡೆ ಏನು? ಎಂಬುದು ನಿಗೂಢವಾಗಿದೆ...

ಮೊದಲ ದಿನ ಬಿಜೆಪಿಯ ನಡೆ ಏನು?
ಪ್ರತಿಪಕ್ಷ ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಆರೋಪಿಸುತ್ತಿದೆ. ಮುಂಗಾರು ಅಧಿವೇಶನದ ಮೊದಲ ದಿನ ಬಿಜೆಪಿ ಸರ್ಕಾರ ವಿಶ್ವಾಸಮತವನ್ನುಯಾಚಿಸಲಿ ಎಂದು ಒತ್ತಾಯಿಸುವ ನಿರೀಕ್ಷೆ ಇದೆ. ಪ್ರತಿಪಕ್ಷದ ತಂತ್ರಕ್ಕೆ ತಿರುಗೇಟು ನೀಡಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್, ಜೆಡಿಎಸ್‌ನಿಂದ ವಿಪ್ ಜಾರಿ?
ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಶಾಸಕರಿಗೆ ಶುಕ್ರವಾರ ಸದನಕ್ಕೆ ಹಾಜರಾಗುವಂತೆ ವಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ವಿಪ್ ಜಾರಿಯಾದರೆ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಆಯ್ಕೆಯಾದ ಪಕ್ಷದ ಪರವಾಗಿಯೇ ಮತಹಾಕಬೇಕಿದೆ.

ಸರ್ಕಾರ ಪತನವಾಗುವುದಿಲ್ಲ
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವುದಿಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ' ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮೈತ್ರಿಕೂಟದ ನಾಯಕರ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಗೆ ಹಿನ್ನಡೆ ಆಗಲಿದೆಯೇ?
ಪ್ರತಿಪಕ್ಷ ಬಿಜೆಪಿ ಸರ್ಕಾರ ರಚನೆ ಮಾಡುವ ಕನಸು ಮತ್ತೊಮ್ಮೆ ಭಗ್ನವಾಗಲಿದೆಯೇ? ಎಂಬುದು ಶುಕ್ರವಾರ ತೀರ್ಮಾನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆ ನಡೆಯಲಿದೆ. ಒಂದು ವೇಳೆ ಸರ್ಕಾರ ಬಹುಮತ ಸಾಬೀತು ಮಾಡಿದರೆ ಇನ್ನು ಆರು ತಿಂಗಳು ಸರ್ಕಾರ ಉಳಿಯಲಿದೆ.












Click it and Unblock the Notifications