ರಮೇಶ್ ಕುಮಾರ್ ಚುನಾವಣೆಗೆ ಖರ್ಚು ಮಾಡಿದ್ದೆಷ್ಟು?
ಬೆಂಗಳೂರು, ಜು. 14 : ಇಂದಿನ ದಿನಗಳಲ್ಲಿ ರಾಜಕಾರಣ ಮತ್ತು ವ್ಯಾಪಾರದ ನಡುವೆ ಇದ್ದ ಗೆರೆ ಮಾಯವಾಗಿದೆ. ಬಗೆ-ಬಗೆಯ ಲಂಚಗಳು ಹುಟ್ಟಿಕೊಳ್ಳುತ್ತಿವೆ ಎಂದು ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದರು. ಈ ಕುರಿತು ಸೋಮವಾರದ ಕಲಾಪದಲ್ಲಿ ಕೆಲವು ಹೊತ್ತು ಚರ್ಚೆ ನಡೆಯಿತು.
ಮುಂಗಾರು ಅಧಿವೇಶದನ 16ನೇ ದಿನವಾದ ಸೋಮವಾರದ ಕಲಾಪದಲ್ಲಿ ವಿದ್ಯುತ್ ಇಲಾಖೆ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ರಮೇಶ್ ಕುಮಾರ್, ಇಂದು ರಾಜಕಾರಣ ವ್ಯಾಪಾರವಾಗಿ ಬಿಟ್ಟಿದೆ. ಮೊದಲ ಚುನಾವಣೆಯಲ್ಲಿ ನಾನು 35 ಸಾವಿರ ರೂ. ಖರ್ಚು ಮಾಡಿದ್ದೆ. ಆದರೆ, ಮೊನ್ನೆ ನಡೆದ ಚುನಾವಣೆಯಲ್ಲಿ 3.50 ಕೋಟಿ ರೂ. ಖರ್ಚು ಮಾಡಿ ಗೆದ್ದುಬಂದೆ ಎಂದು ಹೇಳಿದರು.

ರಮೇಶ್ ಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಚುನಾವಣೆಯಲ್ಲಿ ಹೆಚ್ಚು ಖರ್ಚು ಮಾಡಿದ ಕಾರಣಕ್ಕಾಗಿ ನಿಮ್ಮನ್ನು ಚುನಾವಣಾ ಆಯೋಗಕ್ಕೆ ಹಿಡಿದುಕೊಡಬೇಕಾಗುತ್ತದೆ ಎಂದರು. ಆಗ ಉತ್ತರ ನೀಡಿದ ರಮೇಶ್ ಕುಮಾರ್, "ಪರವಾಗಿಲ್ಲ ಹಿಡಿದುಕೊಡಿ, ಚುನಾವಣಾ ಆಯೋಗ ನನ್ನನ್ನ ಸದಸ್ಯತ್ವವನ್ನು ಅನರ್ಹ ಮಾಡಿದರೆ ಮಾಡ್ಲಿ, ನನಗೂ ಅದೇ ಬೇಕು. ನಾನೊಬ್ಬನೇನೋ ಹೋಗಲ್ಲ. ಆ ರೀತಿ ಹೋಗುವುದಾದರೆ ಇಡೀ ಸದನವನ್ನೇ ಎಳೆದುಕೊಂಡು ಹೋಗ್ತೀನಿ" ಎಂದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಈ ಚರ್ಚೆಗೆ ಧ್ವನಿಗೂಡಿಸಿ, ಧ್ವನಿಗೂಡಿಸಿ ಲಂಚದ ಹಾವಳಿ ನಿಂತಿಲ್ಲ ಎಂದು ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಹಿಂದೆ ಲಂಚದ ಹಾವಳಿ ಇತ್ತು. ಗುತ್ತಿಗೆದಾರರಿಂದ ಲಂಚ ಸ್ವೀಕರಿಸಲಾಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅದು ಕಡಿಮೆಯಾಗಿದೆ ಎಂದು ಹೇಳಿದರು.
ಚಾಲಕರಿಗೆ ಎಸ್ಎಸ್ಎಲ್ ಸಿ ಕಡ್ಡಾಯವಲ್ಲ : ಆಟೋ ಚಾಲಕರ ಪರವಾನಗಿ ಪತ್ರ ಪಡೆಯಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಬೇಕೆಂಬ ನಿಯಮ ಕಡ್ಡಾಯಗೊಳಿಸಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಮೋಟಾರ್ ವಾಹನ ನಿಯಮಾವಳಿ 1989ರ ಪ್ರಕಾರ ಯಾವುದೇ ಸಾರಿಗೆ ವಾಹನದ ಚಾಲನೆಗೆ ಪರವಾನಗಿ ಪಡೆಯಲು 8ನೇ ತರಗತಿ ಉತ್ತೀರ್ಣತೆಯ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿರುತ್ತದೆ. ೧೦ನೇ ತರಗತಿಯನ್ನು ಕಡ್ಡಾಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಗಂಗಾವತಿ ಕ್ಷೇತ್ರದ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸ್ಪಷ್ಟನೆ ನೀಡಿದರು.
ತಂಬಾಕು ನಿಷೇಧವಿಲ್ಲ : ಪ್ರತ್ಯೇಕವಾಗಿ ಮಾರಾಟ ಮಾಡುವ ತಂಬಾಕು ಹಾಗೂ ಪಾನ್ ಮಸಾಲವನ್ನು ನಿಷೇಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷದ ಮೇ 30ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯದಲ್ಲಿ ಗುಟ್ಕಾ ಪದಾರ್ಥ ನಿಷೇಧಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಗುಟ್ಕಾ ಜತೆ ಜರ್ದಾವನ್ನು ಸಹ ನಿಷೇಧಿಸಲಾಗಿದೆ. ಶಾಲಾ-ಕಾಲೇಜುಗಳ ಸುತ್ತ 100 ಮೀ ಅಂತರದಲ್ಲಿ ತಂಬಾಕುಯುಕ್ತ ವಸ್ತುಗಳ ಮಾರಾಟ ನಿಷೇಧಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.












Click it and Unblock the Notifications