ಸಿದ್ದು, ದೇಶಪಾಂಡೆ ಡೆಪ್ಯುಟೇಶನ್ ಮೇಲೆ ಕಾಂಗ್ರೆಸ್ಸಿಗೆ!
ಬೆಂಗಳೂರು, ಜು 2: ಸದನದ ಕಲಾಪಗಳನ್ನು ನೋಡೊದಂದ್ರೆ ಒಂದು ರೀತಿಯಲ್ಲಿ ಕ್ಲಾಸ್ ಮತ್ತು ಮಾಸ್ ಸಿನಿಮಾ ವೀಕ್ಷಿಸಿದಂತೆ. ಅಲ್ಲಿ ಹಾಸ್ಯವೂ ಇರುತ್ತೆ, ಇನ್ನೊಬ್ಬರ ಕಾಲೂ ಎಳೆಯುತ್ತಾರೆ, ಕೂಗಾಡ್ತಾರೆ, ಶರ್ಟೂ ಹರ್ಕೋತಾರೆ, ಶಾಯಿರಿನೂ ಹಾಡ್ತಾರೆ. ಮಂಗಳವಾರ (ಜು 1) ಮಳೆಗಾಲದ ಏಳನೇ ದಿನದ ಅಧಿವೇಶನದ ಕಲಾಪಗಳು ಹಲವು ಹಾಸ್ಯಮಯ ಪ್ರಸಂಗಕ್ಕೆ ಸಾಕ್ಷಿಯಾಯಿತು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಬಂಧ ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿತ್ತು. ಯಲಬುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಸರಕಾರವನ್ನೇ ಬೆಂಡೆತ್ತುತ್ತಿದ್ದರು. ತಮ್ಮ ಪಕ್ಷದವರಿಂದಲೇ ಮುಜುಗರಕ್ಕೀಡಾಗುತ್ತಿದ್ದಾಗ ಮುಖ್ಯಮಂತ್ರಿಗಳು ಮತ್ತು ಇಲಾಖೆಯ ಸಚಿವ ಎಚ್ ಕೆ ಪಾಟೀಲ್ ಒಬ್ಬರ ಮುಖ ಇನ್ನೊಬರು ನೋಡಿಕೊಳ್ಳುತ್ತಿದ್ದರು.
ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ ಎಂದು ರಾಯರೆಡ್ಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೈಕ್ ಇದ್ದಕ್ಕಿದ್ದಂತೆ ಕೈಕೊಟ್ಟಿತು. ಅಯ್ಯೋ ಶಿವನೇ.. ಎಂದು ಅವರು ಹತಾಶರಾದರು. ಆಗ ಸುಮ್ಮನಿರಲಾರದೇ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ 'ಮೂವತ್ತು ವರ್ಷದಿಂದ ರಾಜಕೀಯ ಮಾಡುತ್ತಿದ್ದೀರಾ, ಏನು ಪ್ರಯೋಜನ ಬಂತು. ನಿಮಗೆ ಅದೃಷ್ಟ ಇಲ್ಲ ಬಿಡಿ, ಈಗ ಮೈಕ್ ಬೇರೆ ಕೈಕೊಡ್ತು' ಎಂದು ಲೇವಡಿ ಮಾಡಿದರು. (ವಿದ್ಯುತ್ ಸಮಸ್ಯೆ ದೇವರಿಂದಲೂ ಬಗೆಹರಿಯೋಲ್ಲ)

ಹೌದು ನೀವು ಹೇಳೋದು ಖರೇ ಅಯ್ತೆ. ನನ್ನ ನಸೀಬೇ ಸರಿ ಇಲ್ಲ ಬಿಡ್ರೀ..ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ರಾಯರೆಡ್ಡಿ ಪ್ರತಿಕ್ರಿಯಿಸಿದರು. ಆಗ ಅಥಣಿ ಬಿಜೆಪಿ ಶಾಸಕ ಲಕ್ಷಣ್ ಸವದಿ, ರಾಯರೆಡ್ಡಿ ಸರಕಾರಕ್ಕೆ ಮುಜುಗರವಾಗುವಂತೆ ಮಾತನಾಡುತ್ತಿದ್ದಾರೆ. ಸರಕಾರದವರೇ ಮೈಕ್ ಕೆಡುವಂತೆ ಪಿತೂರಿ ಯಾಕೆ ಮಾಡಿರಬಾರದೆಂದು ವ್ಯಂಗ್ಯ ವಾಡಿದರು.
ಇದಾದ ನಂತರ ಇದೇ ಇಲಾಖೆಯ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಲಾರಂಭಿಸಿದರು. ಸದನದಲ್ಲಿ ಸರಕಾರವನ್ನು ತನ್ನದೇ ಶೈಲಿಯಲ್ಲಿ ಲೇವಡಿ ಮಾಡುತ್ತಿದ್ದ ಸಂದರ್ಭದಲ್ಲಿ, ನಾನು ಪೂರ್ಣಾವಧಿಗೆ ಸಿಎಂ ಆಗಿರುತ್ತೇನೋ, ಇಲ್ಲವೋ ಎಂದು ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಆಡಿದ ವೈರಾಗ್ಯದ ಮಾತು ಸದನದಲ್ಲಿ ಪ್ರತಿಧ್ವನಿಸಿತು.
ಆಗ ಜಗದೀಶ್ ಶೆಟ್ಟರ್, ಈ ಸರಕಾರಕ್ಕೆ ಹೊಸ ತಾಲೂಕು ರಚಿಸುವ ಭಾಗ್ಯವಿಲ್ಲ, ಬಡವರಿಗೆ ಬಿಪಿಎಲ್ ಕಾರ್ಡ್ ಕೊಡುವ ಯೋಗವಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಗಳಿಗೆ ಐದು ವರ್ಷಗಳ ಅಧಿಕಾರದ ಭಾಗ್ಯವೂ ಇಲ್ಲ ಎಂದು ಕೂತಲ್ಲೇ ಕಿಚಾಯಿಸಿದರು.
ಶೆಟ್ಟರ್ ಹೇಳಿಕೆಗೆ ತುಪ್ಪ ಸುರಿದ ಕುಮಾರಸ್ವಾಮಿ, ಸಿದ್ರಾಮಣ್ಣ ಐದು ವರ್ಷ ಅಧಿಕಾರ ನಡೆಸಬೇಕೆನ್ನುವುದು ನಮ್ಮದೂ ಆಶಯ. ಎಷ್ಟಂದ್ರೂ ಅವರು ನಮ್ಮ ಪಕ್ಷದ ಪ್ರಾಡಕ್ಟ್ ಅಲ್ವೇ' ಎಂದು ಗಹಗಹಿಸಿ ನಕ್ಕರು. ಆಗ ಮತ್ತೆ ಎದ್ದ ಶಾಸಕ ಲಕ್ಷಣ್ ಸವದಿ, ಹೌದು..ಹೌದು.. ಸಿದ್ರಾಮಣ್ಣ ಮತ್ತು ದೇಶಪಾಂಡೆ ಸಾಹೇಬ್ರು ಡೆಪ್ಯುಟೇಶನ್ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದಾರೆ. ಕೆಲಸ ಮಗಿದ ಮೇಲೆ ಮತ್ತೆ ನಿಮ್ಮ ಪಕ್ಷಕ್ಕೆ ಬರ್ತಾರೆ ಬಿಡಿ ಎಂದು ಕಿಚಾಯಿಸಿದರು. (ಆಹಾ ಎಂಥಾ ಶಾಸಕರನ್ನ ಆರಿಸಿದ್ದೀರ್ರೀ, ಮತದಾರರೆ)
ಚರ್ಚೆ ಮುಂದುವರಿಸುತ್ತಾ ಕುಮಾರಸ್ವಾಮಿ ಮಾತನಾಡುತ್ತಿರ ಬೇಕಾದರೆ, ಇದ್ಯಾವುದರ ಪರಿವೆಯೇ ಇಲ್ಲದಂತೆ ಎಚ್ ಡಿ ರೇವಣ್ಣ ಸಚಿವ ಎಚ್ ಕೆ ಪಾಟೀಲರ ಬಳಿ ಅದ್ಯಾವುದೋ ಕಡತಕ್ಕೆ ಸಹಿ ತೆಗೆದುಕೊಳ್ಳುತ್ತಿದ್ದರು. ಎರಡು ಬಾರಿ ಇದನ್ನೇ ಗಮನಿಸಿದ ಎಚ್ಡಿಕೆ ಅಣ್ಣನಿಗೆ ನಗುತ್ತಲೇ ಚಾಟಿ ಬೀಸಿದರು.
'ಅಣ್ಣಾ, ಫೈಲಿಗೆ ಸಹಿ ಆಮೇಲೆ ಇಸ್ಕೋ. ನೀನು ಆಮೇಲೆ ಫೈಲ್ ಕೊಟ್ರೂ ಪಾಟೀಲ್ರು ಸಹಿ ಹಾಕಲ್ಲಾಂತ ಹೇಳಲ್ಲ ಬಿಡು' ಎಂದು ಚಟಾಕಿ ಸಿಡಿಸಿದರು. ಆದರೆ ರೇವಣ್ಣ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಸಚಿವರ ಬಳಿ ಸಹಿ ಹಾಕಿಸಿಕೊಳ್ಳುವ ಕೆಲಸವನ್ನು ಮುಂದುವರಿಸಿದ್ದರು. ಇದನ್ನು ಗಮನಿಸುತ್ತಿದ್ದ ಸದನದಲ್ಲಿದ್ದ ಎಲ್ಲಾ ಶಾಸಕರು ತಮ್ಮಷ್ಟಕ್ಕೇ ತಾವೇ ನಗುತ್ತಿದ್ದರು.












Click it and Unblock the Notifications